ಮುಲ್ಕಿ | ನಾಗಬ್ರಹ್ಮ ಟ್ರೋಫಿ-2025 ವಾಲಿಬಾಲ್ ಪಂದ್ಯಾಕೂಟ : ಸ್ಕೂಲ್ ಫ್ರೆಂಡ್ಸ್ ತೋಕೂರು ಪ್ರಥಮ

ಮುಲ್ಕಿ: ನಾಗಬ್ರಹ್ಮ ಫ್ರೆಂಡ್ಸ್ ಹೊಸಕಾಡು ಇದರ ಆಶ್ರಯದಲ್ಲಿ ಎರಡನೇ ಆವೃತ್ತಿಯ ನಾಗಬ್ರಹ್ಮ ಟ್ರೋಫಿ-2025 ವಾಲಿಬಾಲ್ ಪಂದ್ಯಾಕೂಟವು ಹೊಸಕಾಡು ನಾಗಬ್ರಹ್ಮ ಭಜನಾ ಮಂದಿರದ ಬಳಿ ರವಿವಾರ ನಡೆಯಿತು.
ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮುಯ್ಯುದ್ದಿ ಅವರು, ಜಾತಿ ಧರ್ಮಗಳನ್ನು ಮೀರಿ ಭ್ರಾತೃತ್ವ ಕಟ್ಟುವ ಕೆಲಸ ಕ್ರೀಡೆಯಿಂದ ಮಾತ್ರ ಸಾಧ್ಯ. ಕ್ರೀಡೆ ಶಾಂತಿ ಸಹಧರ್ಮ ಸಹಬಾಳ್ವೆಯ ಸಂಕೇತ ಎಂದು ನುಡಿದರು.
ಇದೇ ವೇಳೆ ಕ್ರೀಡಾಕೂಟದಲ್ಲಿ ಬಹುಮಾನ ವಿಜೇತ ತಂಡಗಳಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಸ್ಕೂಲ್ ಫ್ರೆಂಡ್ಸ್ ತೋಕೂರು ಪ್ರಥಮ ಸ್ಥಾನ ಮುಡಿಗೇರಿಸಿಕೊಂಡು ನಾಗಬ್ರಹ್ಮ ಟ್ರೋಫಿ-2025 ಟ್ರೋಫಿ ಮತ್ತು 11,111 ನಗದು ಪುರಸ್ಕಾರವನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಬಹುಮಾನ ಪಡೆದುಕೊಂಡ ಯುನೈಟೆಡ್ ತಾಳಿಪಾಡಿ ತಂಡವು ಟ್ರೋಫಿ ಮತ್ತು 8,888 ನಗದನ್ನು ಪಡೆದುಕೊಂಡಿತು. ತೃತೀಯ ಬಹುಮಾನ ಪಡೆದುಕೊಂಡ ಪಕ್ಷಿಕೆರೆ ಫ್ರೆಂಡ್ಸ್ ಪಕ್ಷಿಕೆರೆ ನಾಗಬ್ರಹ್ಮ ಟ್ರೋಫಿ ಜೊತೆಗೆ 4,444 ಮತ್ತು ಚತುರ್ಥ ಸ್ಥಾನ ಪಡೆದ ಕಾರಿಂಜೆ ಗುಡ್ಡೆ ಫ್ರೆಂಡ್ಸ್ ಟ್ರೋಫಿ ಮತ್ತು 2,222 ನಗದು ಪುರಸ್ಕಾರವನ್ನು ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಮುಬೈಯ ಉದ್ಯಮಿ ವಿಶ್ವನಾಥ ತಿಮ್ಮಯ್ಯ ಪೂಜಾರಿ, ಕೆಮ್ರಾಲ್ ಗ್ರಾಮ ಪಂಚಾಯತ್ ಸದಸ್ಯೆ ರೇವತಿ ಶೆಟ್ಟಿಗಾರ್, ಶಶಿ ಸುರೇಶ್ ಶೆಟ್ಟಿಗಾರ್, ಅಕ್ಷಿತಾ ಅಕ್ಷಯ್ ಶೆಟ್ಟಿ, ತಾರನಾಥ ಶೆಟ್ಟಿ, ಹರೀಶ್ ಸುವರ್ಣ, ನಾಗಬ್ರಹ್ಮ ಫ್ರೆಂಡ್ಸ್ ಹೊಸಕಾಡು ಇದರ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.







