ಬಹುಕೋಟಿ ರೂ. ವಂಚನೆ ಪ್ರಕರಣ: ಆರೋಪಿ ರೋಶನ್ ವಿರುದ್ಧದ 2 ಪ್ರಕರಣಗಳಿಗೆ ಹೈಕೋರ್ಟ್ ತಡೆ

ರೋಶನ್ ಸಲ್ದಾನ
ಮಂಗಳೂರು: 200 ಕೋಟಿಗೂ ಅಧಿಕ ವಂಚನೆ ಮಾಡಿರುವ ಪ್ರಕರಣದ ಆರೋಪಿ ಮಂಗಳೂರಿನ ಜೆಪ್ಪಿನಮೊಗರಿನ ನಿವಾಸಿ ರೋಶನ್ ಸಲ್ದಾನ ವಿರುದ್ಧದ 2 ಪ್ರಕರಣಗಳಿಗೆ ಹೈಕೋರ್ಟ್ ತಡೆ ನೀಡಿದೆ.
ಬಿಹಾರದ ಉದ್ಯಮಿಗೆ ಹತ್ತು ಕೋಟಿ ರೂ. ವಂಚನೆ ಮತ್ತು ಮಂಗಳೂರಿನ ವ್ಯಕ್ತಿಗೆ ಒಂದೂವರೆ ಕೋಟಿ ರೂ. ವಂಚನೆ ಪ್ರಕರಣದಲ್ಲಿ ಹೈಕೋರ್ಟ್ ಪೊಲೀಸರ ತನಿಖಾ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ತಿಳಿದು ಬಂದಿದೆ.
ಆರೋಪಿ ರೋಶನ್ ಸಲ್ದಾನ ಎಂಬಾತನನ್ನು ಸಿಇಎನ್ ಪೊಲೀಸರು ಬಂಧಿಸಿದ್ದರು. ಆತನ ಬಂಧನ ವಿಚಾರ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆ ಈತನಿಂದ ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಲು ಆರಂಭಿಸಿದ್ದರು.
ಬಿಹಾರ ಮೂಲದ ಉದ್ಯಮಿ ತನಗೆ ಹತ್ತು ಕೋಟಿ ರೂಪಾಯಿ ವಂಚನೆ ಎಸಗಿದ್ದಾನೆಂದು ದೂರು ನೀಡಿ ದ್ದರು. ಅಸ್ಸಾಂ ಮತ್ತು ಮಹಾರಾಷ್ಟ್ರ ಮೂಲದ ವ್ಯಕ್ತಿಗಳು ತಮಗೆ ಆರೋಪಿಯು 5 ಕೋಟಿ ರೂ.ನಂತೆ ವಂಚನೆ ಮಾಡಿರುವುದಾಗಿ ದೂರು ನೀಡಿದ್ದರು. ಇದಕ್ಕೂ ಮೊದಲೇ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಒಂದೂವರೆ ಕೋಟಿ ರೂ. ವಂಚಿಸಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಮಂಗಳೂರಿನಲ್ಲಿ ದಾಖಲಾದ ಎರಡು ದೂರನ್ನು ಆಧರಿಸಿ ಪೊಲೀಸರು ಆರೋಪಿ ರೋಶನ್ ಸಲ್ದಾನ ವಿರುದ್ಧ ಕಾರ್ಯಾಚರಣೆ ನಡೆಸಿ ಆತನ ಮನೆಯಲ್ಲೇ ಬಂಧಿಸಿದ್ದರು.
ಬಂಧನ ಸಂದರ್ಭ ತನ್ನ ಮನೆಯ ಒಳಗಡೆಯೇ ವಿದೇಶಿ ಮದ್ಯವನ್ನೊಳಗೊಂಡ ಬಾರ್ ಆ್ಯಂಡ್ ರೆಸ್ಟೋರೆಂಟ್ ರೀತಿ ಮಾಡಿರುವುದು ಪತ್ತೆಯಾಗಿತ್ತು. ಮಲೇಷ್ಯಾದ ಯುವತಿ ಈತನೊಂದಿಗೆ ಇರುವುದು ಕಂಡುಬಂದಿತ್ತು.
ಮಂಗಳೂರಿನ ಸಿಜೆಎಂ ಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದರೂ, ಇತರ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಈತನಿಗೆ ಜಾಮೀನು ಸಿಕ್ಕಿರಲಿಲ್ಲ.
ಈ ನಡುವೆ ಹೈಕೋರ್ಟ್ ಮೂಲಕ ಎರಡು ಪ್ರಕರಣಗಳಿಗೆ ತಡೆಯಾಜ್ಞೆ ತರಲಾಗಿದೆ. ಮಂಗಳೂರಿನಲ್ಲಿ ರೋಶನ್ ಸಲ್ದಾನ ಪರವಾಗಿ ಹಿರಿಯ ಕ್ರಿಮಿನಲ್ ವಕೀಲ ಅರುಣ್ ಬಂಗೇರ ವಕಾಲತ್ತು ನಡೆಸುತ್ತಿದ್ದಾರೆ.
ಇದೀಗ ಆರೋಪಿ ರೋಶನ್ ಸಲ್ದಾನ ಪೊಲೀಸರ ಕಸ್ಟಡಿಯಲ್ಲಿದ್ದು, ಎರಡು ಪ್ರಕರಣಗಳಿಗೆ ತಡೆ ಸಿಕ್ಕಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಇದೇ ವೇಳೆ ಬಂಧನಕ್ಕೆ ತಡೆಯಾಜ್ಞೆ ನೀಡಿ, ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.







