ವಿಶ್ವಶಾಂತಿಗೆ ನಾರಾಯಣ ಗುರುಗಳ ಸಂದೇಶ ಪೂರಕ: ಡಾ.ಕೆ. ನಾರಾಯಣ ಪೂಜಾರಿ

ಪುತ್ತೂರು: ಪರಂಪರೆ, ಸನಾತನ ಮೌಲ್ಯಗಳನ್ನು ಎತ್ತಿ ಹಿಡಿಯುವುದರ ಜತೆಗೆ ಪರಂಪರೆಯಲ್ಲಿ ಬೆಳೆದು ಬಂದಿದ್ದ ಅಸಮಾ ನತೆ, ದಬ್ಬಾಳಿಕೆ, ದಬ್ಬಾಳಿಕೆಯನ್ನು ತೊಡೆದು ಸಮಾನತೆಯ ಸಮಾಜ ಕಟ್ಟುವಲ್ಲಿ ಗುರುಗಳ ಪಾತ್ರ ಬಹಳ ದೊಡ್ಡದಿದ್ದು, ವಿಶ್ವಶಾಂತಿಗೆ ನಾರಾಯಣ ಗುರುಗಳ ಸಂದೇಶ ಪೂರಕವಾಗಿದೆ ಎಂದು ಮೂಲ್ಕಿ ವಿಜಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಕೆ. ನಾರಾಯಣ ಪೂಜಾರಿ ಅಭಿಪ್ರಾಯ ಪಟ್ಟರು.
ಅವರು ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಇವುಗಳ ಜಂಟಿ ಆಶ್ರಯದಲ್ಲಿ ಪುತ್ತೂರಿನ ನಾರಾಯಣ ಗುರು ಸಭಾಭವನದಲ್ಲಿ ಗುರುವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದರು.
ಆದಿಗುರು ಶಂಕರಾಚಾರ್ಯ ಅವರ ಅದ್ವೈತ ತತ್ವಸಾರವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಪ್ರಚಾರ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಕೇರಳ ಇವತ್ತು ಅತ್ಯಂತ ಸುಶಿಕ್ಷಿತ, ಸ್ವಾವಲಂಬಿತ, ಪ್ರಗತಿಪರ ಮತ್ತು ನಾಗರಿಕ ಸಮಾಜವಾಗಿ, ದೇವರ ಸ್ವಂತ ನಾಡಾಗಿ ಬೆಳೆಗುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನ ಒಗ್ಗಟ್ಟು ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲು ನಾರಾಯಣ ಗುರುಗಳೇ ಕಾರಣ ಎಂದರು.
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷತೆ ವಹಿಸಿ ದ್ದರು. ಅತಿಥಿಗಳಾದ ಲಯನ್ಸ್ ಜಿಲ್ಲೆ 317ಡಿ ಇದರ ಪೂರ್ವ ರಾಜ್ಯಪಾಲ ಡಾ.ಗೀತಾಪ್ರಕಾಶ್, ಬೆಂಗಳೂರಿನ ಉದ್ಯಮಿ ನಟೇಶ್ ಪೂಜಾರಿ ಪುಳಿತ್ತಡಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ. ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಸಮುದಾಯದ ಸಾಧಕರಾದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕøತ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ, ವೈದ್ಯಕೀಯ ಕ್ಷೇತ್ರದ ಡಾ. ಸದಾನಂದ ಪೂಜಾರಿ, ಸಾಮಾಜಿಕ ಸೇವಾ ಕ್ಷೇತ್ರದ ಪಿ.ಆನಂದ ಟೈಲರ್ ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಬಿಲ್ಲವ ಸಮಾಜದ 18 ಮಂದಿಯನ್ನು ಸನ್ಮಾನಿಸಲಾಯಿತು. ನಾರಾಯಣ ಗುರು ಜಯಂತಿ ಪ್ರಯುಕ್ತ ನೂರಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒಟ್ಟು 5 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ವಿದ್ಯಾನಿಧಿ ಯೋಜನೆಯ ಅಡಿಯಲ್ಲಿ ವಿತರಿಸಲಾಯಿತು. ಜಗದೀಶ್ ಶಾಂತಿ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು.
ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸುವರ್ಣ, ಕೋಶಾಧಿಕಾರಿ ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್, ಜತೆ ಕಾರ್ಯದರ್ಶಿ ದಯಾನಂದ ಕರ್ಕೆರ, ಉಪಾಧ್ಯಕ್ಷರಾದ ವಿಮಲಾ ಸುರೇಶ್, ಅಶೋಕ್ ಕುಮಾರ್ ಪಡ್ಪು, ಗುರುಮಂದಿರದ ಕಾರ್ಯನಿರ್ವಹಣಾ ಅಧಿಕಾರಿ ಉದಯ ಕುಮಾರ ಕೊಲಾಡಿ ಉಪಸ್ಥಿತರಿದ್ದರು. ಶಶಿಧರ ಕಿನ್ನಿಮಜಲು ಕಾರ್ಯಕ್ರಮ ನಿರ್ವಹಿಸಿದರು.







