ವೆಲೆನ್ಸಿಯಾ ಸಮುದಾಯ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಮಕ್ಕಳು, ಓದುಗರಿಗೆ ಸ್ಪರ್ಧೆ

ಮಂಗಳೂರು, ನ.16: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025ರ ಅಂಗವಾಗಿ ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯ, ವೆಲೆನ್ಸಿಯಾದಲ್ಲಿ ಮಕ್ಕಳಿಗಾಗಿ ಹಾಗೂ ಓದುಗರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ದಿನ ನಡೆದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದವರಿಗೆ ಬಹುಮಾನ ನೀಡಲಾಯಿತು.
ದ.ಕ. ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಗಾಯತ್ರಿ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಕ್ಕಳು ತೋರಿಸಿದ ಉತ್ಸಾಹ ಮತ್ತು ಸೃಜನಶೀಲತೆ ನಮಗೆ ಅಪಾರ ಸಂತೋಷ ತಂದಿದೆ. ಪುಸ್ತಕಗಳು ಕೇವಲ ಮನರಂಜನೆಯಷ್ಟೇ ಅಲ್ಲ, ಜ್ಞಾನಕ್ಕೆ ದಾರಿ ತೆರೆದಿಡುವ ಅಮೂಲ್ಯ ಸಂಗಾತಿಗಳಾಗಿವೆ’ ಎಂದರು.
ತೀರ್ಪುಗಾರರಾದ ಶಿಕ್ಷಕ ಉಮೇಶ್ ಕಾರಂತ, ಶೇಷಗಿರಿ ಉಪಸ್ಥಿತರಿದ್ದರು. ಓದುಗರ ಆಶುಭಾಷಣ ಸ್ಪರ್ಧೆಯಲ್ಲಿ ಒಲಿವರ್ ಡಿ ಸೋಜ ಪ್ರಥಮ, ಶೇಷಗಿರಿ ದ್ವಿತೀಯ ಹಾಗೂ ಗೋಪಾಲಕೃಷ್ಣ ಭಟ್ ತೃತೀಯ ಸ್ಥಾನ ಪಡೆದರು.
ಬಾಲವಾಡಿ ಮಕ್ಕಳ ಕಪ್ಪೆ ಜಿಗಿತ ಸ್ಪರ್ಧೆಯಲ್ಲಿ ಆರ್ಯನ್, ಆರಾಧ್ಯ ಮತ್ತು ಮಲ್ಲಿಕಾರ್ಜುನ ವಿಜೇತರಾದರು.
1 ಮತ್ತು 2ನೇ ತರಗತಿಯ ಮಕ್ಕಳಿಗೆ ನಡೆದ ಬಕೆಟ್ ನಲ್ಲಿ ಬಾಲ್ ಹಾಕುವ ಸ್ಪರ್ಧೆಯಲ್ಲಿ ಸಂಜನಾ, ನಿಶಾನ್ ಹಾಗೂ ದ್ರಾಕ್ಷಾಯಿಣಿ ಅವರು ಬಹುಮಾನ ಪಡೆದರು.
3 ಮತ್ತು 4ನೇ ತರಗತಿಯ ಕನ್ನಡ ಓದು ಸ್ಪರ್ಧೆಯಲ್ಲಿ ವಿಕ್ರಂ, ಹನುಮಾನ್ ಮತ್ತು ಯಮನಾರಿ ವಿಜೇತರಾದರೆ, 5ನೇ ತರಗತಿಯ ಜ್ಞಾಪಕಶಕ್ತಿ ಸ್ಪರ್ಧೆಯಲ್ಲಿ ಸಮೀರ್, ಗ್ರೀಷ್ಮ ಮತ್ತು ಸಂಜನಾ ಬಹುಮಾನ ಗಳಿಸಿದರು.
6 ಮತ್ತು 7ನೇ ತರಗತಿಯ ಆಶುಭಾಷಣ ಸ್ಪರ್ಧೆಯಲ್ಲಿ ಭೂಮಿಕಾ, ಶುಭನ್ ಮತ್ತು ಲಾಸ್ಯ ಶೆಟ್ಟಿಯವರು ಕ್ರಮವಾಗಿ ಮೊದಲ ಮೂರೂ ಸ್ಥಾನ ಪಡೆದರು.
ಮಾಲತಿ ಬಿ. ಶೆಟ್ಟಿ ವಂದಿಸಿದರು. ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆಯ ರಿನ್ಸಿ ಪಿ. ವಿ. ಕಾರ್ಯಕ್ರಮ ನಿರ್ವಹಿಸಿದರು.







