ಸಂತ ಪರಂಪರೆಯಿಂದ ಪ್ರಾಕೃತಿಕ ಸಮತೋಲನ: ಪ್ರಸನ್ನ ಹೆಗ್ಗೋಡು
ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯಿಂದ 'ಭಾರತೀಯ ಸಂತ ಪರಂಪರೆ' ವಿಷಯದ ಉಪನ್ಯಾಸ ಕಾರ್ಯಕ್ರಮ

ಮಂಗಳೂರು, ಡಿ.4: ಪ್ರಪಂಚದ ಎಲ್ಲಾ ಧರ್ಮಗಳನ್ನು ಸ್ಥಾಪಿಸಿರುವುದು ಸಂತ ಪರಂಪರೆಯಾಗಿದ್ದು, ವಿಶ್ವಕ್ಕೆ ಧರ್ಮವನ್ನು ಸಾರಿದ ಭಾರತೀಯ ಸಂತ ಪರಂಪರೆಯ ಮೂಲಕ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದು ಹಿರಿಯ ರಂಗಕರ್ಮಿ, ಚಿಂತಕ ಪ್ರಸನ್ನ ಹೆಗ್ಗೋಡು ಅಭಿಪ್ರಾಯಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿಪಿ. ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಸೋಮವಾರ ವಿವಿಯಲ್ಲಿ ಆಯೋಜಿಸಿದ್ದ 'ಭಾರತೀಯ ಸಂತ ಪರಂಪರೆ' ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ಸಂತ ಪರಂಪರೆಯು ಮಾನವ ಕುಲದ ಕೈಗಳ ಬಳಕೆಯ ಮೂಲಕ ಸಭ್ಯತೆ ಬೆಳೆಸಲು ಕಾರಣವಾಗಿದೆ. ಆದರೆ ಅಭಿವೃದ್ಧಿ, ಪ್ರಗತಿಯ ನೆಪದಲ್ಲಿ ಮಾನವ ತನ್ನ ಕೈಗಳ ಬಳಕೆಯನ್ನು ಮಿತಿಮೀರಿ ಉಪಯೋಗಿಸಿದ ಪರಿಣಾಮ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಿದೆ. ಮಾನವರನ್ನು ಹೊರತುಪಡಿಸಿ ಪ್ರಕೃತಿಯ ಇತರ ಜೀವ ಸಂಕುಲಗಳು ತಮ್ಮ ಹಸಿವಿಗಾಗಿ ಮಾತ್ರವೇ ನೈಸರ್ಗಿಕ ಸಂಪತ್ತನ್ನು ಬಳಕೆ ಮಾಡಿಕೊಂಡರೆ, ಮಾನವ ತನ್ನ ಅಹಂಕಾರ, ಆಸ್ತಿಗಾಗಿ ಪ್ರಕೃತಿಯನ್ನು ಮಿತಿಮೀರಿ ಉಪಯೋಗಿಸಿದ ಕಾರಣ ಪ್ರಪಂಚವು ಬೆಂಕಿ ಪ್ರಳಯದ ಭೀತಿ ಎದುರಿಸುವಂತಾಗಿದೆ ಎಂದವರು ಹೇಳಿದರು.
ಮಾನವನ ನಡುವಿನ ಅಹಂಕಾರ, ಕೌರ್ಯ, ಅನುಮಾನ, ಅಸಹಕಾರವು ಯುದ್ಧ, ಹತ್ಯೆ, ಅಸಹನೆಗೆ ಕಾರಣವಾಗುತ್ತಿರುವುದನ್ನು ನಾವು ಇತಿಹಾಸದಿಂದ ನೋಡುತ್ತಾ ಬಂದಿದ್ದೇವೆ. ಎಲ್ಲಾ ಸಂದರ್ಭಗಳಲ್ಲೂ ಜಾಗೃತ ಮಾನವರು ಸಂತರಾಗಿ ಧರ್ಮವನ್ನು ಅನುಸರಿಸುವ ದಾರಿ ತೋರಿಸಿಕೊಟ್ಟರು. ಸಂತ ಪರಂಪರೆಯ ಮೂಲ ಕೊಂಡಿಯೇ ಕಾಯಕ ಹಾಗೂ ಭಿಕ್ಷುಕ ಜೀವನ. ಆದರೆ ಆಧುನಿಕತೆಯ ಭರದಲ್ಲಿ ಮನುಕುಲ ಯಂತ್ರ ನಾಗriಕತೆಯನ್ನು ನೆಚ್ಚಿಕೊಳ್ಳುತ್ತಾ ಸಾಗಿದಂತೆ ಮಾನವ ಶ್ರಮ ನಗಣ್ಯವಾಗಿದೆ. ಅತೀ ಶೀಘ್ರದಲ್ಲೇ ಸಂಪೂರ್ಣ ಯಂತ್ರವೇ ಉತ್ಪಾದನಾ ಕ್ಷೇತ್ರವನ್ನು ತನ್ನ ಕೈವಶ ಮಾಡಲಿದ್ದು, ಶ್ರಮ ಜೀವನ ಸಂಪೂರ್ಣವಾಗಿ ಕೊನೆಯಾಗಲಿದೆ. ಅದಕ್ಕಾಗಿ ವಿಜ್ಞಾನಿಗಳು, ರಾಜಕಾರಣಿಗಳು, ತಂತ್ರಜ್ಞರು ದಾಪುಗಾಲಿಡುತ್ತಿದ್ದು, ಆರ್ಟಿಫಿಶಿಯಲ್ ಇಂಟೆಲೆಜೆನ್ಸಿಯೂ ಈ ನಿಟ್ಟಿನಲ್ಲಿ ಮುನ್ನೆಲೆಯಲ್ಲಿದೆ. ಆದರೆ ಇಂತಹ ಪರಿಸ್ಥಿತಿಯಿಂದ ಪ್ರಾಕೃತಿಕ ಸಮತೋಲನ ಸಾಧ್ಯವೇ ಎಂಬುದನ್ನು ಅರಿಯುವುದು ಹಾಗೂ ಸಂತ ಪರಂಪರೆಯ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದು ಬಹು ಮುಖ್ಯ ಎಂದವರು ವಿಷದ ಪಡಿಸಿದರು.
ಅಹಂಕಾರ, ಆಸ್ತಿ, ಅತಿರೇಕವನ್ನು ಕಳಚಿಸಿಕೊಳ್ಳುವುದೇ ಧರ್ಮ. ಈ ಕಳಚಿಕೊಳ್ಳುವುದನ್ನು ಕಾಲಕಾಲಕ್ಕೆ ಧರ್ಮಗಳನ್ನು ಸ್ಥಾಪಿಸಿದ ಸಂತರು ವಿಭಿನ್ನ ವಿಧಾನಗಳಲ್ಲಿ ತೋರಿಸಿಕೊಟ್ಟಿದ್ದಾರೆ. ವಿಶ್ವಕ್ಕೆ ಧರ್ಮವನ್ನು ಕೊಟ್ಟ ದೇಶ ನಮ್ಮದು ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಪಂಚದಲ್ಲಿ ಇರದ ಸವಲತ್ತು ನಮ್ಮ ದೇಶದಲ್ಲಿ ಇಂದೂ ಇದೆ. ಕೈ ಉತ್ಪನ್ನಗಳು ನಮ್ಮಲ್ಲಿ ಹೇರಳವಾಗಿದ್ದು, ಅಪಾರವಾದ ಕೌಶಲ್ಯ ಜೀವಂತವಾಗಿದೆ. ಹಾಗಾಗಿ ಯಾಂತ್ರೀಕೃತ ಕೈಗಾರಿಕೆಗಳ ಬದಲು ಕೈ ಉತ್ಪನ್ನಗಳಿಗೆ ಒತ್ತು ನೀಡಬೇಕು ಎಂದು ಪ್ರಸನ್ನ ಹೆಗ್ಗೋಡು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಯರಾಜ್ ಅಮೀನ್ ಮಾತನಾಡಿ, ಪ್ರಗತಿ ಮತ್ತು ಪ್ರಕೃತಿಯ ಬಗ್ಗೆ ಸರಿಯಾದ ಸೂಕ್ಷ್ಮತೆಯನ್ನು ಅರಿತುಕೊಂಡು ಮುನ್ನಡೆಯಬೇಕು ಎಂದರು.
ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ನಾಡು ಸಂತ ಪರಂಪರೆ ಹಾಗೂ ಮಹಾನ್ ಚಿಂತಕರನ್ನು ಒಳಗೊಂಡಿದೆ. ಮಹಾನ್ ಚಿಂತಕರ ತತ್ವ ಚಿಂತನೆಗಳು ವಿದ್ಯಾರ್ಥಿಗಳಿಗೂ ತಲುಪಬೇಕು ಎನ್ನುವುದು ಪ್ರಸನ್ನ ಹೆಗ್ಗೋಡು ಅವರ ಆಶಯವಾಗಿದೆ. ಆ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ನುಡಿದರು.
ಅಕ್ಕಾಮಹಾದೇವಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಪತಿ ಪ್ರೊ.ಸಬಿಹಾ ಭೂಮಿಗೌಡ, ಹಿರಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶಿವರಾಮ ಶೆಟ್ಟಿ, ಡಾ.ನಾಗಪ್ಪ ಗೌಡ, ಪ್ರೊ.ಪರಿಣಿತಾ, ಡಾ.ರಾಜಾರಾಮ ತೋಳ್ಪಾಡಿ, ವಾಣಿ ಪೆರಿಯೋಡಿ ಉಪಸ್ಥಿತರಿದ್ದರು.
ಡಾ.ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಮನುಕುಲ ಅಗ್ನಿಪ್ರಳಯದ ಅಂಚಿಗೆ ತಲುಪಿದೆ ಎನ್ನುವ ಮಾತನ್ನು ವಿಜ್ಞಾನಿಗಳೇ ಹೇಳುತ್ತಿದ್ದಾರೆ. ಅಮೆರಿಕ, ಯೂರೋಪ್ಗೂ ಬೆಂಕಿ ಪ್ರಳಯದ ಬಗ್ಗೆ ಅರಿವಿದೆ. ಅವರು ಇಲೆಕ್ಟ್ರಿಕ್ ವೆಹಿಕಲ್, ಗಾಳಿ ಗಿರಣಿಗಳ ಬಗ್ಗೆ ಮಾತನಾಡುತ್ತಿದ್ದರೂ, ಅದರಿಂದ ವಿನಾಶವನ್ನು ತಡೆಯಲು ಸಾಧ್ಯವಿಲ್ಲ ಎಂಬ ಅರಿವು ಅವರಿಗೂ ಇದೆ. ಪ್ರಪಂಚದ ಮಹಾನ್ ಸಮುದ್ರ ಎಂದು ಕರೆಯಲ್ಪಡುವ ಉಜ್ಬೇಕಿಸ್ತಾನದ ಪಕ್ಕದ ಮಧ್ಯಪ್ರಾಚ್ಯದ ದೊಡ್ಡ ಸಮುದ್ರವೇ ಬತ್ತಿ ಹೋಗಿದೆ ಎಂಬ ಸುದ್ದಿ ಬಂದಿದೆ. ಇಂತಹ ಸಮಯದಲ್ಲಿ ಭಾರತ ಕೈ ಉತ್ಪನ್ನಗಳನ್ನು ವಿಕೇಂದ್ರೀಕೃತ ಕೈಗಾರಿಕೆಗಳ ಬಗ್ಗೆ ನಮ್ಮ ಸರಕಾರಗಳು, ರಾಜಕಾರಣಿಗಳು ಗಮನಹರಿಸಬೇಕಾಗಿದೆ. ವಿಶ್ವಕ್ಕೆ ನಮ್ಮ ಸಾಮರ್ಥ್ಯವನ್ನು ತೋರಿಸಿ, ಪ್ರಾಕೃತಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸಂತ ಪರಂಪರೆಯ ಆಚಾರಕ್ಕೆ ನಾವು ಹಿಂದಿರುಗುವುದು ನಮ್ಮ ಮುಂದಿರುವ ಏಕೈಕ ದಾರಿ.
- ಪ್ರಸನ್ನ ಹೆಗ್ಗೋಡು, ಹಿರಿಯ ರಂಗಕರ್ಮಿ







