ನೆಹರೂರವರ ಓದು, ಪ್ರಜಾತಾಂತ್ರಿಕ ಕಾಳಜಿ ವಿಶೇಷವಾದುದು : ಪ್ರೊ.ವಲೇರಿಯನ್ ರಾಡ್ರಿಗಸ್

ಕೊಣಾಜೆ: ನೆಹರೂರವರ ಓದು ಮತ್ತು ಬರವಣಿಗೆಯ ಆಸಕ್ತಿ ಅವರ ಪ್ರಜಾತಾಂತ್ರಿಕ ಕಾಳಜಿಗಳು ಮತ್ತು ಎಲ್ಲರನ್ನು ಒಳಗೊಳ್ಳುವ ರೀತಿ ವಿಶೇಷವಾದುದು ಎಂದು ಪ್ರಾಧ್ಯಾಪಕರಾದ ದೆಹಲಿಯ ಜೆಎನ್ ಯು ವಿವಿಯ ವಿಶ್ರಾಂತ ಪ್ರೊ.ವಲೇರಿಯನ್ ರೊಡ್ರಿಗಸ್ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರವು ಆಂಗ್ಲ ವಿಭಾಗದ ಸಹಯೋಗದೊಂದಿಗೆ ಐದು ದಿನಗಳ ಕಾಲ ನಡೆಯಲಿರುವ ಅಧ್ಯಾಪಕ ಚಿಂತನ ಪ್ರಗತಿ ಕಾರ್ಯಕ್ರಮವನ್ನು ಮಂಗಳೂರು ವಿವಿಯ ಯು.ಆರ್.ರಾವ್ ಸಭಾಂಗಣದಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಭಾರತದ ನಿರ್ಮಾತೃ ರಾದ ನೆಹರೂರವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲು ವಾಸದಲ್ಲಿದ್ದಾಗ ಬರೆದ ಪುಸ್ತಕಗಳು ಅವರ ಗಾಢ ಮತ್ತು ವಿಮರ್ಶತ್ಮಕ ಚಿಂತನೆಯ ಶಕ್ತಿಯನ್ನು ಬಿಂಬಿಸುತ್ತದೆ. ಇತಿಹಾಸ ದ ಜಠಿಲ ವಿಚಾರಗಳನ್ನು ಸರಳವಾಗಿ ಮತ್ತು ಸಮಗ್ರವಾಗಿ ವಿವರಿಸುವ ಅವರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದರು.
ಮಂಗಳೂರು ವಿವಿ ಕುಲಸಚಿವರಾದ ರಾಜು ಮೊಗವೀರ ಅವರು ಮಾತನಾಡಿ, ನೆಹರು ಚಿಂತನ ಕೇಂದ್ರ ಆಯೋಜಿಸುತ್ತಿರುವ ಅಧ್ಯಾಪಕ ಚಿಂತನ ಪ್ರಗತಿ ಕಾರ್ಯಕ್ರಮವು ಶಿಕ್ಷಕರಿಗೆ ಹೊಸ ಆಲೋಚನೆ, ಚಿಂತನೆ ಮತ್ತು ಪರಾಮರ್ಶಿಸಲು ಒಂದು ಅವಕಾಶವನ್ನು ಒದಗಿಸುತ್ತದೆ. ಈ ಐದು ದಿನಗಳ ಉಪನ್ಯಾಸ ಮತ್ತು ಸಂವಾದ ಹೊಸ ಆಲೋಚನೆಗಳಿಗೆ ನಮ್ಮನ್ನು ತೆರೆಯಲಿ ಮತ್ತು ಈ ಆಲೋಚನೆಗಳು ತರಗತಿಗಳನ್ನು ತಲುಪಲಿ ಎಂದು ಆಶಿಸಿದರು.
ಕಲಾ ನಿಕಾಯದ ಡೀನ್ ಅವರು ಪ್ರೊ.ಪರಿಣಿತಾ ಅವರು ಮಾತನಾಡಿ, ಈ ಕಾರ್ಯಕ್ರಮವು ತರಗತಿಯ ಪರಿಕಲ್ಪನೆಯನ್ನು ವಿಶ್ಲೇಷಿಸಿ, ಅದು ವಿವಿಧ ಸಾಮಾಜಿಕ ವಲಯಗಳಿಂದ ಬಂದ ಸಮುದಾಯಗಳನ್ನು ಒಳಗೊಂಡು ಸಂವಾದ ಮತ್ತು ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸುವ ಸ್ಥಳವಾಗಿರಬೇಕೆಂದು ಅಭಿಪ್ರಾಯಪಟ್ಟರು.
ಹೈದರಾಬಾದ್ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಸಶೀಜ್ ಹೆಗಡೆ, ಸಮಾಜಶಾಸ್ತ್ರ ವಿಭಾಗದ ವಿಶ್ರಾಂತ ವಿಭಾಗದ ಪ್ರೊ.ವಿನಯ್ ರಜತ್, ಪ್ರಾಧ್ಯಾಪಕರಾದ ಪ್ರೊ.ಮೋನಿಕಾ ಸದಾನಂದ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯಾವುದೇ ಪುಸ್ತಕಗಳ ಸಹಾಯವಿಲ್ಲದೆ ನೆಹರೂರವರು ಬರೆದ ಬರವಣಿಗೆಗಳು ಮತ್ತು ಅವರ ನಿರಂತರ ಓದು ಇಂದಿನ ಶಿಕ್ಷಕರಿಗೆ ಸ್ಫೂರ್ತಿಯಾಗಿದೆ.
-ಕೆ.ರಾಜು ಮೊಗವೀರ, ಕುಲಸಚಿವರು







