ಮಂಗಳೂರು ಜೈಲಿನಲ್ಲಿನ ಮೊಬೈಲ್ ಜಾಮರ್‌ನಿಂದ ನೆಟ್‌ವರ್ಕ್ ಸಮಸ್ಯೆ: ಹೈಕೋರ್ಟ್ ನಲ್ಲಿ ಒಪ್ಪಿಕೊಂಡ ಕೇಂದ್ರ-ರಾಜ್ಯ ಸರಕಾರ

ಮಂಗಳೂರು,ನ.28: ನಗರದ ಕೋಡಿಯಾಲ್ ಬೈಲ್ ನಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾದ ಮೊಬೈಲ್ ಜಾಮರ್ ನಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆಯಾಗುತ್ತಿರುವ ಬಗ್ಗೆ ಹೈಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಪ್ಪಿಕೊಂಡಿವೆ.
ಈ ಬಗ್ಗೆ ಮಂಗಳೂರಿನ ವಕೀಲರ ಸಂಘ ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಟೆಲಿಕಾಂ ಕಂಪೆನಿಯ ಅಧಿಕಾರಿಗಳಿಗೆ, ಮಂಗಳೂರು ಜೈಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಜೈಲಿನಲ್ಲಿ ಅಳವಡಿಸಿರುವ ಜಾಮರ್ ನಿಂದ ಉಂಟಾದ ನೆಟ್‌ವರ್ಕ್ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಸೂಚಿಸಿತ್ತು. ಅದರಂತೆ ವರದಿ ಸಲ್ಲಿಸಲಾಗಿತ್ತು.
ಕೇಂದ್ರ ಹಾಗೂ ರಾಜ್ಯ ಸರಕಾರದ ಪರ ವಕೀಲರು ವಾದ ಮಂಡಿಸಿದ್ದರು. ದೂರಸಂಪರ್ಕ ಇಲಾಖೆ ಈ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಬಂದೀಖಾನೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದೆ. ಅಲ್ಲದೆ ಜಾಮರ್ ನಿಂದಾಗಿ ನೆಟ್‌ವರ್ಕ್ ಸಮಸ್ಯೆ ಇರುವ ಬಗ್ಗೆ ತಿಳಿಸಿದೆ. ಇನ್ನೊಂದೆಡೆ ರಾಜ್ಯ ಸರಕಾರದ ಬಂದೀಖಾನೆ ಇಲಾಖೆ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ಕೇಂದ್ರ ದೂರಸಂಪರ್ಕ ವಿಭಾಗಕ್ಕೆ ಪತ್ರ ಬರೆದಿದ್ದಾರೆ.
ಹೈಕೊರ್ಟ್ ನಲ್ಲಿ ಶುಕ್ರವಾರ ವಿಚಾರಣೆ ವೇಳೆ ವಕೀಲರ ಸಂಘದ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಪಿ.ಪಿ.ಹೆಗ್ಡೆ, ಮಂಗಳೂರು ಜೈಲಿನಲ್ಲಿ ಜಾಮರ್ ಇದ್ದರೂ ಮೊಬೈಲ್ ನೆಟ್ ವರ್ಕ್ ಸಿಗುತ್ತಿದೆ. ಆದರೆ 900 ಮೀಟರ್ ವ್ಯಾಪ್ತಿಯೊಳಗೆ ಕಚೇರಿ, ಕೋರ್ಟ್, ಸಂಘ ಸಂಸ್ಥೆಗಳು, ಬ್ಯಾಂಕ್, ಕಾಲೇಜುಗಳು ಇರುವಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಉಲ್ಭಣವಾಗಿದೆ. ಆದ್ದರಿಂದ ಜೈಲಿನ ಜಾಮರನ್ನು ತೆಗೆದುಹಾಕಬೇಕು ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಜೈಲಿನಲ್ಲಿ ಜಾಮರ್ ಅಳವಡಿಕೆಯಿಂದ ಉಂಟಾದ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮದ ಬಗ್ಗೆ ಡಿ.1 ರಂದು ಅಧಿಕೃತವಾಗಿ ತಿಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ.







