ರಂಗಭೂಮಿಯಲ್ಲಿ ಏಕತಾನತೆಗೆ ಎಂದೂ ಶರಣಾಗಲಾರೆ: ವಿಜಯ ಕುಮಾರ್ ಕೊಡಿಯಾಲ್ ಬೈಲ್
ಮಂಗಳೂರು ಪ್ರೆಸ್ ಕ್ಲಬ್ ಗೌರವ ಸ್ವೀಕಾರ

ಮಂಗಳೂರು, ಸೆ.28: ರಂಗಭೂಮಿಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ಆದರೆ ಎಂದೂ ಏಕತಾನತೆಗೆ ಶರಣಾಗಿಲ್ಲ. ಮುಂದೆಯೂ ಶರಣಾಗಲಾರೆ ಎಂದು ರಂಗಕರ್ಮಿ, ನಟ, ನಿರ್ದೇಶಕರಾದ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಹೇಳಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಗುರುವಾರ ಗೌರವ ಸ್ವೀಕರಿಸಿದ ಬಳಿಕ ತಮ್ಮ ರಂಗಭೂಮಿ ಹಾಗೂ ಸಿನೆಮಾ ಲೋಕದ ಪಯಣವನ್ನು ಬಿಚ್ಚಿಟ್ಟ ಅವರು, ಪ್ರೆಸ್ ಕ್ಲಬ್ ಗೌರವ ರಾಜ್ಯ ಪ್ರಶಸ್ತಿ ಸಿಕ್ಕ ಖುಷಿ ನೀಡಿದೆ ಎಂದರು.
ನಾಟಕ ರಂಗವಾಗಲಿ, ಸಿನೆಮಾ ಆಗಿರಲಿ ವಿಭಿನ್ನ ಪ್ರಯೋಗವೇ ನನ್ನ ಆಯ್ಕೆ. ಹಾಗಾಗಿ ‘ಶಿವಧೂತೆ ಗುಳಿಗೆ’ ಪೌರಾಣಿಕ ನಾಟಕ ದೇಶ ವಿದೇಶಗಳಲ್ಲಿ ರಂಗಭೂಮಿಯ ಹೊಸ ಮಗ್ಗಲನ್ನು ಪ್ರದರ್ಶಿಸಲು ಅವಕಾಶ ನೀಡಿತು. ಮತ್ತೆ ಪೌರಾಣಿಕ ನಾಟಕ ಮಾಡುವ ಇರಾದೆ ಇಲ್ಲ. ಏಕತಾನತೆಯನ್ನು ಅಪ್ಪಿಕೊಳ್ಳದಿರುವ ನನ್ನ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.
ಮಹಾರಾಷ್ಟ್ರದಲ್ಲಿ ಹುಟ್ಟಿ ತಂದೆಯನ್ನು ಕಳೆದುಕೊಂಡ ಬಳಿಕ ಅಲ್ಲಿಗೆ ಮಂಗಳೂರಿಗೆ ಬಂದು ತೀರಾ ಸಂಕಷ್ಟದ ಜೀವನವನ್ನು ಎದುರಿಸಬೇಕಾಯಿತು. ಪತ್ರಿಕೆ, ಹಾಲು ಮಾರಾಟ ಮೂಲಕ ಶಿಕ್ಷಣ ಮುಂದುವರಿಸಿ ಪಿಯುಸಿ ಬಳಿಕ ರಂಗಭೂಮಿಯತ್ತ ಆಕರ್ಷಿತನಾದೆ. ಅಭಿನಯಕ್ಕೆಂದು ರಂಗಭೂಮಿಗೆಯತ್ತ ಹೋದವ ಪತ್ರಿಕೆಗಳ ಓದುವ ಹವ್ಯಾಸ ನಾಟಕ ಬರೆಯಲು ಪ್ರೇರೇಪಿಸಿತು. ನನ್ನ ‘ಒಂಟಿ ನಿಮಿಷ’ ನಾಟಕ ಹಿಟ್ ಆದ ಬಳಿಕ ನನ್ನ ಜೀವನಕ್ಕೆ ಹೊಸ ತಿರುವು ನೀಡಿದ್ದು 'ಒರಿಯರ್ದೊರಿ ಅಸಲ್' ನಾಟಕ. ವರ್ಷಕ್ಕೊಂದು ನಾಟಕ ಮಾಡಬೇಕೆಂದುಕೊಂಡಿದ್ದ ನನಗೆ ಈ ನಾಟಕ ದಿನಕ್ಕೊಂದು ನಾಟಕ ಮಾಡುವಂತೆ ಮಾಡಿತು. ಈ ನಾಟಕದ ಬಳಿಕ ತಂಡ ಇಬ್ಭಾಗಗೊಂಡು ಸಾಕಷ್ಟು ಬದಲಾವಣೆಯಾಯಿತು. ಆ ಸಂದರ್ಭದಲ್ಲಿ ಭೂಗತ ಜಗತ್ತಿನ ತಲ್ಲಣವನ್ನು ಒಳಗೊಂಡ 'ಒಯಿಕ್ಲಾ ಆವಂದಿನಕಲು' ನಾಟಕ ಹುಟ್ಟಿಕೊಂಡಿತು. ಗಂಭೀರ ನಾಟಕವಾಗಿ ಇದು ಮೆಚ್ಚುಗೆ ಪಡೆದರೂ ಕಮರ್ಷಿಯಲ್ ಆಗಿ ಇದು ಏಟು ನೀಡಿತು. ಈ ಸಂದರ್ಭ ಗಂಭೀರ, ಹಾಸ್ಯಮಯದಿಂದ ಹೊಸತೇನು ಮಾಡಬೇಕು ಎಂದಾಗ ಹುಟ್ಟಿಕೊಂಡಿದ್ದೇ 'ಶಿವಧೂತೆ ಗುಳಿಗೆ' ಎಂದವರು ತಮ್ಮ ರಂಗಭೂಮಿಯ ಏಳುಬೀಳುಗಳ ಬಗ್ಗೆ ವಿವರ ನೀಡಿದರು.
ಸದ್ಯ 'ಮೈತಿದಿ' ನಾಟಕ ಮೂರು ಯಶಸ್ವಿ ಪ್ರದರ್ಶನದೊಂದಿಗೆ ಮುಂದೆ ಸಾಗುತ್ತಿದೆ. ಸಿನೆಮಾ ಕ್ಷೇತ್ರವು ನಾಟಕ ಆಗುತ್ತಿದೆ ಎಂಬ ಕಲ್ಪನೆ ಮೂಡುತ್ತಿರುವ ಸಮಯದಲ್ಲಿ ಮೈತಿದಿ ನಾಟಕ ಅಲ್ಲ ಸಿನೆಮಾ ಎಂಬ ಉದ್ಘಾರಕ್ಕೆ ಕಾರಣವಾಗಿದೆ. ಬಾಲ್ಯದಿಂದಲೂ ಕ್ರೀಡಾ ಕ್ಷೇತ್ರದಿಂದ ದೂರವುಳಿದಿದ್ದ ನಾನೀಗ ಕ್ರಿಕೆಟ್ ಆಟವನ್ನು ಒಳಗೊಂಡ ಸಿನೆಮಾವೊಂದಕ್ಕೆ ಸಾಹಿತ್ಯ ಸಿದ್ಧಪಡಿಸಿದ್ದೇನೆ. 'ಕಂಬಳ' ಸಿನೆಮಾ ಬಹುತೇಕ ಚಿತ್ರೀಕರಣಗೊಂಡಿದೆ. ಇದಲ್ಲದೆ ತುಳುನಾಡಿನ ಭಾಷೆಯ ಮೇಲ್ಮೆಯನ್ನು ಸಾರುವ ‘ತುಳುವೆ’, ಭೂಗತ ಜಗತ್ತಿನ ಸುತ್ತ ಹೆಣೆದ ‘ಕೊಡಿಯಾಲ್ ಬೈಲ್’ ಚಿತ್ರಕಥೆಯೂ ಸಿದ್ಧವಾಗುತ್ತಿದೆ ಎಂದು ತಮ್ಮ ಮುಂದಿನ ಯೋಜನೆಗಳ ಬಗ್ಗೆ ವಿಜಯ ಕುಮಾರ್ ಕೊಡಿಯಾಲ್ ಬೈಲ್ ವಿವರಿಸಿದರು.
ನನ್ನ ರಂಗಭೂಮಿ ಕ್ಷೇತ್ರದಲ್ಲಿ ನನಗೆ ತುಂಬಾ ಇಷ್ಟವಾದ ನಾಟಕ ‘ಒಯಿಕ್ಲಾ ಆವಂದಿನಕಲು’. ಅದು ಕಡಿಮೆ ಪ್ರದರ್ಶನ ಕಂಡ ಗಂಭೀರ ನಾಟಕ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೇರ ಶುಭ ಹಾರೈಸಿದರು.
ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸ್ವಾಗತಿಸಿ, 'ಒರಿಯರ್ದೊರಿ ಅಸಲ್' ನಾಟಕದ ಮೂಲಕ ತುಳುರಂಗಭೂಮಿಯಲ್ಲಿ ಹೊಸ ಸಂಚಲನಕ್ಕೆ ಕಾರಣರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ‘ಶಿವಧೂತೆ ಗುಳಿಗೆ’ ನಾಟಕ ದೇಶ ವಿದೇಶಗಳಲ್ಲಿ ಅದ್ಭುತ ಪ್ರದರ್ಶನದ ಜತೆಗೆ ರಂಗಭೂಮಿಯ ಹೊಸ ಪ್ರಯೋಗದೊಂದಿಗೆ ಬೆರಗು ಮೂಡಿಸಿದೆ. ಇಂತಹ ಮೇರು ನಟ, ಕಲಾವಿದ, ನಿರ್ದೇಶಕರನ್ನು ಈ ಬಾರಿ ಮಂಗಳೂರು ಪ್ರೆಸ್ ಕ್ಲಬ್ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದರು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯಕ್ರಮ ಸಂಯೋಜಕ ಪುಷ್ಪರಾಜ್ ಬಿ.ಎನ್., ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ, ಪತ್ರಿಕಾ ಭವನ ಟ್ರಸ್ಟ್ ನ ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ವಿಜಯ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಜಿತೇಂದ್ರ ಕುಂದೇಶ್ವರ ವಂದಿಸಿದರು.
‘ಶಿವಧೂತೆ ಗುಳಿಗೆ’ ಗಿನ್ನೆಸ್, ಲಿಮ್ಕಾ ದಾಖಲೆಗೆ ಸಿದ್ಧತೆ
ರಂಗಭೂಮಿಯಲ್ಲಿ ಹೊಸ ಪ್ರಯೋಗವಾಗಿ 500ಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡ ಶಿವಧೂತೆ ಗುಳಿಗೆ ನಾಟಕವನ್ನು ಮುಂದಿನ ವರ್ಷ ಪುರಭವನದಲ್ಲಿ ನಾಲ್ಕು ಭಾಷೆಗಳಲ್ಲಿ ಪ್ರದರ್ಶಿಸುವ ಮೂಲಕ ಗಿನ್ನೆಸ್ ಅಥವಾ ಲಿಮ್ಕಾ ದಾಖಲೆಗೆ ಸೇರಿಸುವ ಬಯಕೆ ಇದೆ. ಒಂದೇ ದಿನದಲ್ಲಿ ಬ್ರೇಕ್ ಇಲ್ಲದೆ ಬೆಳಗ್ಗೆ 10 ಗಂಟೆಯಿಂದ ತುಳು, ಕನ್ನಡ, ಮಲಯಾಳಂ ಹಾಗೂ ಮರಾಠಿ ಭಾಷೆಯಲ್ಲಿ (ತಲಾ ಎರಡು ಗಂಟೆ ಅವಧಿಯಂತೆ) ಒಂದೇ ತಂಡ ನಾಟಕ ಪ್ರದರ್ಶನ ಮಾಡುವ ಬಗ್ಗೆ ತಯಾರಿ ನಡೆಸಲಾಗುತ್ತಿದೆ. ಯಾವುದೇ ಒಂದು ತಂಡ ಮೂರಕ್ಕಿಂತ ಹೆಚ್ಚು ಭಾಷೆಗಳಲ್ಲಿ ಒಂದೇ ನಾಟಕವನ್ನು ಪ್ರದರ್ಶನ ಮಾಡಿದ ದಾಖಲೆ ಈವರೆಗೆ ಇಲ್ಲ ಎಂದು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಹೇಳಿದರು.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.







