ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಸಮಿತಿ ಪದಗ್ರಹಣ

ಮಂಗಳೂರು, ನ. 21: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-2028ನೆ ಸಾಲಿನ ನೂತನ ಸಮಿತಿಯ ಪದ್ರಹಣ ಸಮಾರಂಭ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆಯಿತು. ನೂತನ ಅಧ್ಯಕ್ಷರಾಗಿ ವಾರ್ತಾಭಾರತಿ ಪತ್ರಿಕೆಯ ಮಂಗಳೂರು ಸ್ಥಾನೀಯ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಕೆ. ಪೂಜಾರಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ಸಹಿತ ಜಿಲ್ಲಾ ಸಂಘದ ಇತರ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕರಿಸಿದರು.
ಸಂಘದ ಪೂರ್ವಾಧ್ಯಕ್ಷ ಆನಂದ ಶೆಟ್ಟಿ ಕೆ., ಜಗನ್ನಾಥ ಶೆಟ್ಟಿ ಬಾಳ, ಹರ್ಷ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಹುಟ್ಟು, ಬೆಳವಣಿಗೆ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ ಪೂರ್ವಾಧ್ಯಕ್ಷ ಆನಂದ ಶೆಟ್ಟಿ, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಸಂಘವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಕಟ್ಟಿ ಬೆಳೆಸುವಂತೆ ನೂತನ ಸಮಿತಿಗೆ ಸಲಹೆ ನೀಡಿದರು.
ಸರಳವಾಗಿ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷರಾಗಿ ಮುಹಮ್ಮದ್ ಆರಿಫ್ ಪಡುಬಿದ್ರೆ, ವಿಲ್ಫ್ರೆಡ್ ಡಿಸೋಜಾ, ರಾಜೇಶ್ ಶೆಟ್ಟಿ, ಕೋಶಾಧಿಕಾರಿಯಾಗಿ ವಿಜಯ ಕೋಟ್ಯಾನ್ ಪಡು, ಕಾರ್ಯದರ್ಶಿಗಳಾಗಿ ಸುರೇಶ್ ಡಿ. ಪಳ್ಳಿ, ಸಿದ್ದೀಕ್ ನೀರಾಜೆ, ಸತೀಶ್ ಇರಾ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ಶೆಟ್ಟಿ ಬಿ.ಎನ್, ಸಂದೇಶ್ ಜಾರ, ಸಂದೀಪ್ ಕುಆರ್ ಎಂ., ಲಕ್ಷ್ಮೀ ನಾರಾಯಣ ರಾವ್, ಹರೀಶ್ ಮೋಟುಕಾನ, ದಿವಾಕರ ಪದ್ಮುಂಜ, ಕಿರಣ್ ಯು. ಸಿರ್ಸಿಕರ್, ಅಭಿಷೇಕ್ ಎಚ್.ಎಸ್., ಜಯಶೀ, ಭುವನೇಶ್ವರ ಜಿ., ಸಂದೀಪ್ ವಾಗ್ಲೆ, ಹರೀಶ್ ಕೆ. ಆದೂರ್, ಗಿರೀಶ್ ಅಡ್ಪಂಗಾಯ, ಸಂದೀಪ್ ಸಾಲ್ಯಾನ್, ಆರಿಫ್ ಕಲ್ಕಟ್ಟ ಪ್ರಮಾಣ ವಚನ ಸ್ವೀಕರಿಸಿದರು.
ನೂತನ ಅಧ್ಯಕ್ಷರಾಗಿ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಪುಷ್ಪರಾಜ್ ಬಿ.ಎನ್., ಸಂಘದ ಹಿಂದಿನ ಅವಧಿಯಲ್ಲಿ ನಡೆದಿರುವ ಮಾದರಿ ಕಾರ್ಯಕ್ರಮಗಳನ್ನು ಮುಂದುವರಿಸುವ ಜತೆಗೆ, ಪತ್ರಕರ್ತರ ಆರೋಗ್ಯಕ್ಕೆ ಸಂಬಂಧಿಸಿ ವಿಮಾ ಯೋಜನೆಯಂತಹ ಅಗತ್ಯ ಯೋಜನೆಗಳನ್ನು ರೂಪಿಸಲು ಒತ್ತು ನೀಡುವುದಾಗಿ ಹೇಳಿದರು.
ತಾಲೂಕು ಸಂಘಗಳ ಬಲವರ್ದನೆಗೆ ಜತೆಗೆ ಜಿಲ್ಲಾ ಸಂಘದಿಂದ ಆರಂಭಿಸಲಾಗಿರುವ ಕ್ಷೇಮನಿಧಿಯನ್ನು ವಿಸ್ತರಿಸುವುದು, ಅಂಚೆ ಅಪಘಾತ ವಿಮೆಯನ್ನು ಮುಂದುವರಿಸುವುದು ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಸಂಘವನ್ನು ಸುವ್ಯವಸ್ಥೆಯಿಂದ ಮುನ್ನಡೆಸಲು ಸರ್ವರ ಸಹಕಾರ ಅಗತ್ಯವಿದೆ. ಸಮಾಜವು ಪತ್ರಕರ್ತರ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಂಡು ತಂಡವಾಗಿ ಸಂಘವು ಕಾರ್ಯ ನಿರ್ವಹಿಸಲಿದೆ ಎಂದು ಅವರು ಈ ಸಂದರ್ಭ ಭರವಸೆ ನೀಡಿದರು.












