ಬ್ಯಾರಿ ಕ್ಷೇತ್ರ ಅಧ್ಯಯನದಿಂದ ಹೊಸ ವಿಚಾರಗಳು ಬೆಳಕಿಗೆ: ರಹ್ಮಾನ್ ಕುತ್ತೆತ್ತೂರು

ಗುರುಪುರ :ಸುಮಾರು 1500ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಬ್ಯಾರಿ ಬಗ್ಗೆ ಇನ್ನಷ್ಟು ಕ್ಷೇತ್ರ ಅಧ್ಯಯನಗಳು ನಡೆಯಬೇಕು. ಇದರಿಂದ ಹೊಸ ವಿಚಾರಗಳು ಬೆಳಕಿಗೆ ಬರಲಿದೆ ಎಂದು ಹಿರಿಯ ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಹೇಳಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ರವಿವಾರ ನಡೆದ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಳು, ಕನ್ನಡ ಭಾಷೆಯ ಪ್ರಭಾವದ ಹೊರತಾಗಿಯೂ ಬ್ಯಾರಿ ಸಾಹಿತ್ಯಕವಾಗಿ ಮುನ್ನಡೆಯುತ್ತಿದೆ.ಈ ಭಾಷೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಮಹತ್ತರ ಜವಾಬ್ದಾರಿ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ತುಳು, ಕೊಂಕಣಿಯಂತೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬ್ಯಾರಿ ಪಠ್ಯ ಅಳವಡಿಸಲು ಸರಕಾರ ಮುಂದಾಗಬೇಕು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಬ್ಯಾರಿ ಭಾಷೆಯ ಕಾರ್ಯಕ್ರಮಗಳು ಪ್ರಸಾರ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಆಗ್ರಹಿಸಿದರು.
ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಹಾಜಿ ಎಂ.ಎಚ್. ಮೊಹಿದಿನ್ ಅಡ್ಡೂರು ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ತುಳು ಅಕಾಡಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ಕೊಂಕಣಿ ಅಕಾಡಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮತ್ತಿತರರು ಉಪಸ್ಥಿತರಿದ್ದರು. ಬ್ಯಾರಿ ಅಕಾಡಮಿಯ ರಿಜಿಸ್ಟ್ರಾರ್ ರಾಜೇಶ್ ಜಿ. ಸ್ವಾಗತಿಸಿದರು. ಅಕಾಡಮಿಯ ಸದಸ್ಯ ಯು. ಎಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದ.ಕ. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ, ಕಸಪಾ ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಅಖಿಲ ಭಾರತ ಬ್ಯಾರಿ ಪರಿಷತ್ ಪ್ರಧಾನ ಕಾರ್ಯದರ್ಶಿ ವಿ. ಇಬ್ರಾಹೀಂ ನಡುಪದವು, ಮೇಲ್ತೆನೆಯ ಅಧ್ಯಕ್ಷ ಮಂಗಳೂರ ರಿಯಾಝ್, ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ, ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ಮಾಜಿ ಅಧ್ಯಕ್ಷ ರಶೀದ್ ನಂದಾವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ಯಾರಿ ಇನ್ಫೋ.ಕಾಂನ ಮುಖ್ಯಸ್ಥ ಬಿ.ಎ. ಮುಹಮ್ಮದ್ ಅಲಿ ಸಮಾರೋಪ ಭಾಷಣಗೈದರು.
ಕಾರ್ಯಕ್ರಮದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು, ಕಾರ್ಯಕ್ರಮದ ಸದಸ್ಯ ಸಂಚಾಲಕ ತಾಜುದ್ದೀನ್ ಅಮ್ಮುಂಜೆ, ಅಕಾಡಮಿಯ ಸದಸ್ಯರಾದ ಬಿ.ಎಸ್. ಮುಹಮ್ಮದ್ ಚಿಕ್ಕಮಗಳೂರು, ಶಮೀರಾ ಜಹಾನ್, ಅಬೂಬಕರ್ ಅನಿಲಕಟ್ಟೆ, ಹಮೀದ್ ಹಸನ್ ಮಾಡೂರು, ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಎಂ.ಜಿ.ಸಾಹುಲ್ ಹಮೀದ್ ಗುರುಪುರ, ಸಲೀಂ ಹಂಡೇಲ್, ಕಾರ್ಯದರ್ಶಿಗಳಾದ ಅಬ್ದುಲ್ ಜಲೀಲ್ ಅರಳ ಎಂ.ಡಿ. ನವಾಝ್ ಮತ್ತಿತರರು ಉಪಸ್ಥಿತರಿದ್ದರು.
ಶಮೀಮಾ ಕುತ್ತಾರ್‌ರ ʼಪಡಿಞ್ಞಿರ್ರೊ ಪೂ (ಕಥಾ ಸಂಕಲನ), ಹಸೀನ ಮಲ್ನಾಡ್‌ರ ಮಿನ್ನಾಂಪುಲು (ಹನಿಗವನ ಸಂಕಲನ), ಎನ್.ಎಂ. ಹನೀಫ್ ನಂದರಬೆಟ್ಟು ಅವರ ಸಂಪುಕಾತ್ (ಕವನ ಸಂಕಲನ), ಬಶೀರ್ ಅಹ್ಮದ್ ಬೆಳ್ಳಾಯಿರು ಅವರ ಬೆಲ್‌ಚ (ಕವನ ಸಂಕಲನ), ಹೈದರಲಿ ಕಾಟಿಪಳ್ಳ ಅವರ ಱನಸೀಅತ್ (ಕವನ ಸಂಕಲನ) ಬ್ಯಾರಿ ಕೃತಿಗಳನ್ನು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಬಿಡುಗಡೆಗೊಳಿಸಿದರು.
*ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ನಡೆದ ಚರ್ಚಾಗೋಷ್ಠಿಯಲ್ಲಿ ಸಹಾಯಕ ಪ್ರಾಧ್ಯಾಪಕ ಹೈದರ್ ಅಲಿ, ಪತ್ರಕರ್ತ ಏ.ಕೆ. ಕುಕ್ಕಿಲ, ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಬ್ಯಾರಿ ಅಕಾಡಮಿಯ ಸದಸ್ಯೆ ಹಫ್ಸಾ ಬಾನು ಪಾಲ್ಗೊಂಡರು. ಮಂಗಳೂರು ವಿ.ವಿ. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಚರ್ಚಾಗೋಷ್ಠಿ ನಡೆಸಿಕೊಟ್ಟರು.
*ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ನಡೆದ ಬ್ಯಾರಿ ಕವಿಗೋಷ್ಠಿಯಲ್ಲಿ ಬದ್ರುದ್ದೀನ್ ಕೂಳೂರು, ಖಲಂದರ್ ಬೀವಿ ಅಮಾನುಲ್ಲಾ,ಅಶ್ಫಾಕ್ ಅಹ್ಮದ್ ಕಾಟಿಪಳ್ಳ, ಶಾಹಿದಾ ಮಂಗಳೂರು, ಶಮೀಮ್ ಕುಟ್ಟಿಕಳ, ಅಸ್ಮತ್ ವಗ್ಗ, ರಹೀಂ ಬಿ.ಸಿ.ರೋಡ್ ಕವನ ವಾಚಿಸಿದರು. ಅಕಾಡಮಿಯ ಸದಸ್ಯ ಅನ್ಸಾರ್ ಕಾಟಿಪಳ್ಳ ಕವಿಗೋಷ್ಠಿ ನಿರ್ವಹಿಸಿದರು.
*ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಅಬ್ದುಲ್ ಲತೀಫ್ ಗುರುಪುರ, ಪಾತುಂಞಿ ಮೂಡುಶೆಡ್ಡೆ, ಎಂ.ಪಿ. ಉಸ್ಮಾನ್ ಮುಕ್ರಿಕ ಸೂರಲ್ಪಾಡಿ, ಸುಲೈಮಾನ್ ಗುರುಪುರ, ಸಲೀಕಾ ಸೂರಲ್ಪಾಡಿ, ಆರ್.ಎಸ್. ಅಶ್ರಫ್ ಸೂರಲ್ಪಾಡಿ, ಅಬ್ದುಲ್ ಶರೀಫ್ ಸಾಮರಸ್ಯ ನ್ಯೂಸ್, ಮುಹಮ್ಮದ್ ನಝೀರ್ ಬಜ್ಪೆಅವರನ್ನು ಸನ್ಮಾನಿಸಲಾಯಿತು.
ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಱಬ್ರೋಕರ್ ಪೋಕರ್ ಬ್ಯಾರಿ ನಾಟಕ ಮತ್ತು ಗುರುಪುರದ ಎಂ.ಜಿ.ಎಂ. ತಾಲೀಮು ತಂಡದಿಂದ ತಾಲೀಮು ಪ್ರದರ್ಶನ ನಡೆಯಿತು.
ಬ್ಯಾರಿ ಭವನ ಶೀಘ್ರ ನಿರ್ಮಾಣಗೊಳ್ಳಬೇಕು. ಮಂಗಳೂರು ವಿವಿಯ ಬ್ಯಾರಿ ಅಧ್ಯಯನ ಪೀಠಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು. ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುತ್ತಿರುವ ಯುವಜರನು ಬ್ಯಾರಿ ಭಾಷೆ, ಇತಿಹಾಸ, ಜನಪದ, ಕಲೆ ಇತ್ಯಾದಿಯ ಬಗ್ಗೆ ಸಂಶೋಧನಾತ್ಮಕ ಅಧ್ಯಯನ ನಡೆಸಲು ಮುಂದಾಗಬೇಕು ಇತ್ಯಾದಿ ನಿರ್ಣಯಗಳನ್ನು ಮಂಡಿಸಲಾಯಿತು.







