ರಾಜ್ಯಮಟ್ಟದ ಅಂತರ ವೈದ್ಯಕೀಯ ಕಾಲೇಜು ರಸ ಪ್ರಶ್ನೆ: ಅನಿರುದ್ಧ ರಾವ್ -ರಾಘವ್ ತಂಡಕ್ಕೆ ಕಿಮ್ಸ್ ಯು.ಜಿ. ಮೆಡಿಕ್ವಿಜ್ ಪ್ರಶಸ್ತಿ

ಮಂಗಳೂರು: ‘‘ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ವಿವಿಧ, ನಿಯತಕಾಲಿಕ ಶೈಕ್ಷಣಿಕ ಸ್ಪರ್ಧಾಕೂಟದಲ್ಲಿ ಪಾಲ್ಗೊಂಡು ತಮ್ಮ ಜ್ಞಾನವನ್ನು ವೃದ್ಧಿಸಿದರೆ ಭವಿಷ್ಯದ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು’’ ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರೆಹಮಾನ್ ಸಲಹೆ ನೀಡಿದರು.
ಅವರು ನಗರದ ಕಾಲೇಜಿನ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ನಡೆದ ವೈದ್ಯಕೀಯ ಶಾಸ್ತ್ರ ವಿಭಾಗದ ಪದವಿ ಪೂರ್ವ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗಾಗಿ 3ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜು ರಸಪ್ರಶ್ನೆ ಸ್ಪರ್ಧಾಕೂಟ ಕಿಮ್ಸ್ ಯು.ಜಿ.ಮೆಡಿಕ್ವಿಜ್-2023 ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಈ ಸ್ಪರ್ಧಾಕೂಟದಲ್ಲಿ ಕೆ.ಎಂ.ಸಿ. ಮಣಿಪಾಲ ಕಾಲೇಜನ್ನು ಪ್ರತಿನಿಧಿಸಿದ ಅನಿರುದ್ಧ ರಾವ್ ಮತ್ತು ರಾಘವ್ ತಂಡವು ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ಮೆಡಿಕ್ವಿಜ್ ಪ್ರಶಸ್ತಿ ಪಡೆಯಿತು. ದ್ವಿತೀಯ ಸ್ಥಾನವನ್ನು ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು, ದೇರಳಕಟ್ಟೆ ಇಲ್ಲಿನ ಶಿವರಾಮ್ ಮತ್ತು ತ್ರಿಲೋಚನ್ ತಂಡವು ಪಡೆಯಿತು.
ಇದು ಒಂದು ಕುತೂಹಲಕಾರಿ ಮತ್ತು ರೋಮಾಂಚಕಾರಿ ಸ್ಪರ್ಧೆಯಾಗಿತ್ತು. ಸ್ಪರ್ಧಾ ವಿಜೇತರ ಸಾಧನೆಯನ್ನು ಪ್ರಶಂಶಿಸಿ ಅಬ್ದುಲ್ ರೆಹಮಾನ್‌ರವರು ಆಕರ್ಷಕ ಪ್ರಶಸ್ತಿ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ಪ್ರದಾನ ಮಾಡಿ
ಅಭಿನಂದಿಸಿದರು. ಈ ಸ್ಪರ್ಧಾಕೂಟವನ್ನು ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದೇವದಾಸ್ ರೈಯವರು ನಿರೂಪಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ. ರತ್ನಾಕರ್, ವೈದ್ಯಕೀಯ ಅಧೀಕ್ಷಕ ಪೊ. ಹರೀಶ್ ಶೆಟ್ಟಿ, ಮತ್ತು ಸಲಹಾ ಸಮಿತಿಯ ಸದಸ್ಯರಾದ ಪ್ರೊ. ಎಂ.ವಿ. ಪ್ರಭು ಉಪಸ್ಥಿತರಿದ್ದರು.
ಡಾ. ಶಿಶಿರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಎಂ.ವಿ. ಮಲ್ಯರವರು ಬಹುಮಾನಗಳನ್ನು ಪ್ರಾಯೋಜಿಸಿದ್ದರು.
ಅವಿಭಜಿತ ದ.ಕ. ಜಿಲ್ಲೆಯ ವಿವಿಧ ವೈದ್ಯಕೀಯ ಶಿಕ್ಷಣ ಕಾಲೇಜಿನ 90 ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು.







