ಕೊಚ್ಚಿನ್ ಕನ್ನಡ ಸಂಘದಿಂದ ರಾಜ್ಯೋತ್ಸವ, ದೀಪಾವಳಿ ಆಚರಣೆ

ಮಂಗಳೂರು : ಕೇರಳದ ಕನ್ನಡ ಸಂಘ ಕೊಚ್ಚಿನ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿಯನ್ನು ಸಂಘದ ಕಚೇರಿಯಲ್ಲಿ ಆಚರಿಸಲಾಯಿತು
ಕೊಚ್ಚಿನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಶ್ರೀಕಾಂತ ಆನವಟ್ಟಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕನ್ನಡಿಗರು ಎಲ್ಲೇ ಇರಲಿ ಜನ್ಮಭೂಮಿ ಕರ್ನಾಟಕದ ರಾಜ್ಯೋತ್ಸವವನ್ನು ಆಚರಿಸುವುದು ಅತ್ಯಾವಶ್ಯ.ಈ ಮೂಲಕ ಕನ್ನಡ ನಾಡು ನುಡಿಗೆ ಕಿಂಚಿತ್ತು ಸೇವೆ ಸಲ್ಲಿಸಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಚ್ಚಿನ್ ಕನ್ನಡ ಸಂಘದ ಅಧ್ಯಕ್ಷ ಡಿ.ಶ್ರೀನಿವಾಸ ರಾವ್ ಭಾರತ ದೇಶದ ಅಭಿವೃದ್ಧಿಗೆ ಕರ್ನಾಟಕದ ಕೊಡುಗೆಯನ್ನು ಪ್ರಸ್ತಾವಿಸಿ, ಜನ್ಮ ಭೂಮಿಯಾದ ಕರ್ನಾಟಕವನ್ನು ಬಿಟ್ಟು ಕರ್ಮಭೂಮಿಯಾದ ಕೊಚ್ಚಿನ್ ಮಹಾನಗರದಲ್ಲಿ ವಾಸಿಸುವ ಕನ್ನಡಿಗರು ಇಲ್ಲಿನ ಭಾಷಾ ಸೌಹಾರ್ದತೆಗೆ ಸಲ್ಲಿಸುತ್ತಿರುವ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಕನ್ನಡ ಸಂಘಟಕ ಗಿರೀಶ್ ಪಡ್ಕೆ ರಾಜ್ಯೋತ್ಸವ ಸಂದೇಶ ಹಾಗೂ ಲೇಖಕಿ ಕೊಚ್ಚಿನ್ ಕನ್ನಡ ಸಂಘದ ಜೊತೆ ಕಾರ್ಯದರ್ಶಿ ಪರಿಣಿತ ರವಿ ದೀಪಾವಳಿ ಸಂದೇಶ ನೀಡಿದರು
ಕೊಚ್ಚಿನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಶಿವನಾಥ ಕೌಡಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆಗೈದರು 2023ನೇ ಸಾಲಿನ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪುರಸ್ಕೃತ ನಗರದ ಹಿರಿಯ ವೈದ್ಯ ಡಾ.ಮಲ್ಲಿಕಾರ್ಜುನ ಎಸ್ ನಾಸಿ ಅತಿಥಿಗಳನ್ನು ಸನ್ಮಾನಿಸಿದರು.
ಮೆಡಿಕಲ್ ಟ್ರಸ್ಟ್ ಆಸ್ಪತ್ರೆ ಕೊಚ್ಚಿನ್‌ನ ಹಿರಿಯ ವೈದ್ಯ ಡಾ ಭಾಸ್ಕರ್ ರಾವ್, ಆರ್ಥಿಕ ತಜ್ಞ ಪಿ ಕೆ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು. ಕನ್ನಡ ಸಂಘದ ಜಗನ್ನಾಥ, ತ್ಯಾಗರಾಜ್,ಸುನಂದಾ ಆನವಟ್ಟಿ, ಸುಭಾಷ್ ಗೌಡ, ನಾಗರಾಜ್, ವೆಂಕಟೇಶ್,ರವಿ, ಮೋಹನ್, ಗಂಗಾಧರ, ಸೋಮನಾಥ ಕೌಡಿ, ಮಹೇಶ್ ಮಟ್ಟಾನ್ಚೇರಿ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ ತಂತ್ರಿ ಕನ್ನಡ ಧ್ವಜಾರೋಹಣಗೈದರು.ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಸ್ವಾಗತಿಸಿದರು, ಕೋಶಾಧಿಕಾರಿ ವಿಷ್ಣು ತಂತ್ರಿ ವಂದಿಸಿದರು. ಜ್ಯೋತಿ ತಂತ್ರಿ ಹಾಗೂ ರಾಜಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.







