ಎಂ.ಎಚ್.ಮಲಾರ್‌ಗೆ ಅಬುದಾಭಿಯಲ್ಲಿ ಸನ್ಮಾನ

ಮಂಗಳೂರು : ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಪಡೆದ ನಿವೃತ್ತ ಮುಖ್ಯಶಿಕ್ಷಕ ಎಂ.ಎಚ್. ಮಲಾರ್ ಅವರಿಗೆ ಅಬುದಾಭಿ ಎ.ಝೆಡ್ ಫ್ರೆಂಡ್ಸ್ ಗ್ರೂಪ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಅನುದಾನಿತ ಟಿಪ್ಪುಸುಲ್ತಾನ್ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಎಂ.ಎಚ್. ಮಲಾರ್ ಕನ್ನಡ ಶಾಲೆಯ ಮಕ್ಕಳನ್ನು ವಿದೇಶಕ್ಕೆ ಕರೆದೊಯ್ದಿದ್ದರು. ಶಾಲಾ ಪರಿಸರದ ದಾನಿ ಗಳಿಂದ ಅಕ್ಕಿ, ಇತರ ವಸ್ತುಗಳನ್ನು ಸಂಗ್ರಹಿಸಿ ದೂರದೂರಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ ಕೀರ್ತಿ ಇವರದ್ದಾಗಿದೆ. ಅಲ್ಲದೆ ತಮ್ಮೂರಿನಲ್ಲಿ ರಾತ್ರಿ ಶಾಲೆ ತೆರೆದು ಶಿಕ್ಷಣ ವಂಚಿತರಿಗೆ ಅಕ್ಷರ ಜ್ಞಾನ ನೀಡಿದ್ದರು. ಶಾಲಾ ಮಕ್ಕಳಿಗೆ ಸ್ವಚ್ಚತಾ ಜಾಗೃತಿ ಮೂಡಿಸಿ ಸ್ವಚ್ಚ ಕ್ಯಾಂಪಸ್ ರೂಪಿಸಿದ್ದು ಅವರಿಗೆ ಅರ್ಹವಾಗಿಯೇ ಪ್ರಶಸ್ತಿ ಬಂದಿದೆ ಎಂದು ಸಂಘಟನೆಯ ಪ್ರಮುಖರು ಶ್ಲಾಘಿಸಿದರು.
ಈ ಸಂದರ್ಭ ಎ.ಝೆಡ್. ಗ್ರೂಪ್‌ನ ಪ್ರಮುಖರಾದ ಜಾವೇದ್, ಮರ್ಲೋನ್, ಆಶಿರ್, ಯೋಹಾನ್, ನಿಝಾಮ್ ಮತ್ತಿತರರು ಉಪಸ್ಥಿತರಿದ್ದರು.





