ಬಿಜೆಪಿ ಷಡ್ಯಂತ್ರವನ್ನು ಜನ ತಿರಸ್ಕರಿಸಿದ್ದಾರೆ: ಐವನ್ ಡಿಸೋಜ

ಮಂಗಳೂರು, ಡಿ.2: ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದು, ಬಿಜೆಪಿ ಬುಡ ಅಲ್ಲಾಡುತ್ತಿದೆ. ಧಾರ್ಮಿಕ ಭಾವನೆಯನ್ನು ಪ್ರಚೋದಿಸಿ ಧರ್ಮ, ಜಾತಿ ಆಧಾರದಲ್ಲಿ ಅಧಿಕಾರ ಮಾಡುತ್ತಿರುವ ಬಿಜೆಪಿ ಷಡ್ಯಂತ್ರ ವನ್ನು ಜನ ತಿರಸ್ಕರಿಸಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ ಐವನ್ ಡಿಸೋಜ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ನಡೆದ ಶೇ.40ಕಮಿಷನರ್, ಶಿಕ್ಷಕರ ನೇಮಕ, ಪಿಎಸ್‌ಐ ಹಗರಣ, ಕೋವಿಡ್ ಅವಧಿಯ ಹಗರಣ, ಬಿಟ್ ಕಾಯಿನ್ ಹಗರಣಗಳನ್ನು ರಾಜ್ಯ ಸರಕಾರ ತನಿಖೆಗೆ ಆದೇಶಿಸಿದ್ದು, ಇದರಿಂದ ಬಿಜೆಪಿಯ ಬಣ್ಣ ಬಯಲಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ದೋಚಿದ್ದನ್ನು ತನಿಖೆ ಮೂಲಕ ಕಾಂಗ್ರೆಸ್ ತೆರೆಯುವ ಕೆಲಸ ಮಾಡುತ್ತಿದೆ. ಇದರಿಂದ ಭ್ರಷ್ಟರು ಬಚವಾಗಲು ಸಾಧ್ಯವಿಲ್ಲ ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 350ಕ್ಕೂ ಅಧಿಕಾರ ಸೀಟು ಗೆದ್ದು ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.
ದೇಶ-ರಾಜ್ಯದ ಜನರನ್ನು ಹೆಚ್ಚು ದಿನ ಮೋಸ ಮಾಡಲು ಸಾಧ್ಯವಿಲ್ಲ. 2014-19ರ ಅವಧಿಯಲ್ಲಿ ದೇಶದ 20ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದ್ದರೆ ಈಗ ಅದು 8ರಾಜ್ಯಕ್ಕೆ ಇಳಿದಿರುವುದು ಬಿಜೆಪಿ ಜನಪ್ರಿಯತೆ ಕುಗ್ಗಿರುವುದಕ್ಕೆ ಸಾಕ್ಷಿಯಾ ಗಿದೆ. ಕರ್ನಾಟಕ ಚುನಾವಣೆಯಲ್ಲಿ ಅದು ಮತ್ತೆ ಸಾಬೀತಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜೆ. ಅಬ್ದುಲ್ ಸಲೀಂ, ಅಪ್ಪಿ, ಶುಭೋದಯ ಆಳ್ವ, ಆರೀಫ್ ಬಾವ, ಸಬೀತಾ ಮಿಸ್ಕಿತ್, ನಿತ್ಯಾನಂದ ಶೆಟ್ಟಿ, ಭಾಸ್ಕರ್ ರಾವ್, ಇಮ್ರಾನ್ ಎ.ಆರ್, ಸತೀಶ್ ಪೆಂಗಲ್, ಮೀನಾ ಟೆಲಿಸ್, ಹಬೀಬ್ ಕಣ್ಣೂರು ಉಪಸ್ಥಿತರಿದ್ದರು.







