ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಬಂಧನ

ಸುಳ್ಯ: ಜಟ್ಟಿಪಳ್ಳದಲ್ಲಿರುವ ನಿವೃತ್ತ ಬ್ಯಾಂಕ್ ಅಧಿಕಾರಿ ಮೋಹನದಾಸ ಮುದ್ಯರವರ ಮನೆಯಿಂದ ಚಿನ್ನ ಕಳ್ಳತನ ಮಾಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕಾಸರಗೋಡು ಮೂಲದ ಹಾಶಿಂ(43) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ತಿಂಗಳ ಹಿಂದೆ ಸುಳ್ಯದ ಜಟ್ಟಿಪಳ್ಳದಲ್ಲಿರುವ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ನಡೆದಿತ್ತು. ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು.
ಸುಳ್ಯ ಜಟ್ಟಿಪಳ್ಳದ ಬೋರುಗುಡ್ಡೆಯಲ್ಲಿರುವ ಮಾಲತಿ-ಮೋಹನದಾದ್ ಮನೆಯಲ್ಲಿ ಅ. 20ರಂದು ರಾತ್ರಿ ಕಳ್ಳತನ ನಡೆದಿತ್ತು. ಬ್ಯಾಂಕ್ ಉದ್ಯೋಗಿಯಾಗಿದ್ದ ಮೋಹನ್ ದಾಸ್ ಮುದ್ಯ ಅವರು ಪತ್ನಿ ಮಾಲತಿಯವರ ಜೊತೆಗೂಡಿ ಚೆನ್ನೈಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬಂದು ಹಾಸನದಲ್ಲಿದ್ದ ಮಗಳ ಮನೆಗೆ ತೆರಳಿದ್ದರು. ಈ ವೇಳೆ ಸುಳ್ಯದಲ್ಲಿರುವ ಮನೆಯಲ್ಲಿ ಕಳ್ಳತನ ನಡೆದಿತ್ತು. ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಅಡಿಷನಲ್ ಎಸ್ಪಿ, ಹಾಗೂ ಪುತ್ತೂರು ಡಿವೈಎಸ್‍ಪಿ ಅವರ ಮಾರ್ಗದರ್ಶನ ಮೇರೆಗೆ ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ಉಪನಿರೀಕ್ಷಕ ಈರಯ್ಯ ದೂಂತೂರ್, ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.





