ರಂಗಕರ್ಮಿ ಪ್ರಸನ್ನ ಹೆಗ್ಗೋಡು ನೇತೃತ್ವದ ತಂಡ ಹರೇಕಳಕ್ಕೆ ಭೇಟಿ

ಕೊಣಾಜೆ: ಚರಕ ಮಹಿಳಾ ಪ್ರಾಥಮಿಕ ಸಂಘದ ಸ್ಥಾಪಕ, ರಂಗಕರ್ಮಿ ಪ್ರಸನ್ನ ಹೆಗ್ಗೋಡು ನೇತೃತ್ವದ ತಂಡ ರವಿವಾರ ಹರೇಕಳ ಗ್ರಾಮಕ್ಕೆ ಭೇಟಿ ನೀಡಿ ಹೈನೋದ್ಯಮಿ ಹರೇಕಳ ಮೈಮೂನ ಅವರ ಮನೆಯಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಸಂವಾದ ನಡೆಸಿತು.
ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಮಲಾರ್ ಅವರು ಮೈಮೂನಾರ ಸಾಧನೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಹೈನೋದ್ಯಮಿ ಮರ್ಝೀನಾ ಮಾತನಾಡಿ ಅನಿರೀಕ್ಷಿತವಾಗಿ ತಂದೆ ತೀರಿದ ಬಳಿಕ ಕುಟುಂಬ ದೂರವಾಯಿತು, ತಾಯಿ ಜೊತೆ ಮೂವರು ಹೆಣ್ಮಕ್ಕಳು ಮಾತ್ರ ಇದ್ದೆವು. ತಂದೆಯ ಕನಸು ನನಸಾಗಿಸಲು ಯೋಚಿಸಿ ಲಕ್ಷ್ಮಿ ಹೆಸರಿನ ಒಂದು ಗರ್ಭಿಣಿ ಹಸು ಸಾಕಲು ಆರಂಭಿಸಿ ಮೂರು ವರ್ಷ ಆಗುತ್ತಿದೆ. ಆದಾಯದಲ್ಲಿ ಶೇ.50 ಸಮಾಜಕ್ಕೆ ವಿನಿಯೋಗ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರೂ ನಿಮ್ಮನ್ನು ಗುರುತಿಸಲು ನಮಗೆ ಸಾಧ್ಯವಾಗಿಲ್ಲ ಎಂದು ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ ಖೇದ ವ್ಯಕ್ತಪಡಿಸಿದರು.
ಹರೇಕಳ ಗ್ರಾಪಂ ಉಪಾಧ್ಯಕ್ಷ ಎಂ.ಪಿ.ಮಜೀದ್, ಮಾಜಿ ಅಧ್ಯಕ್ಷ ಬದ್ರುದ್ದೀನ್ ಹರೇಕಳ, ಗ್ರಾಪಂ ಸದಸ್ಯರಾದ ಅಬ್ದುಲ್ ಸತ್ತಾರ್ ಬಾವಲಿಗುರಿ, ಅಶ್ರಫ್, ಸಿಪಿಎಂ ಹಿರಿಯ ಮುಖಂಡ ಕೆ.ಎಚ್.ಹಮೀದ್, ಕಾರ್ಮಿಕ ನಾಯಕ ಸೀತಾರಾಮ ಬೇರಿಂಜ, ಜಿಲ್ಲಾ ಸ್ವಚ್ಚತಾ ರಾಯಭಾತಿ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಶಿವರಾಮ್, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯರಾದ ವಾಣಿ ಪೆರೋಡಿ, ನಿವೃತ್ತ ಶಿಕ್ಷಕಿ ಬಿ.ಎಂ.ರೋಹಿಣಿ, ಉಳ್ಳಾಲ ತಾಲೂಕು ಡಿವೈಎಫ್‌ಐ ನಿಕಟಪೂರ್ವ ಅಧ್ಯಕ್ಷ ರಫೀಕ್ ಹರೇಕಳ, ತಾಲೂಕು ಕಾರ್ಯದರ್ಶಿ ರಿಝ್ವಾನ್ ಕಂಡಿಗ, ಡಿವೈಎಫ್‌ಐ ಮುಖಂಡರಾದ ಹೈದರ್, ಹನೀಫ್ ಸೈಟ್, ಬಶೀರ್, ರಫೀಝ್, ಕೆ.ಎಚ್.ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.







