ಪುತ್ತೂರು: ಕಳವು ಪ್ರಕರಣ; ಆರೋಪಿ ಬಂಧನ

ಪುತ್ತೂರು: ವಿವಿಧ ಕಡೆಗಳಲ್ಲಿ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬಂಧಿಸಿರುವ ಪುತ್ತೂರು ನಗರ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಉಪ್ಪಳ್ಳಿ ನಿವಾಸಿ ಅಬೂಬಕ್ಕರ್ ಬಂಧಿತ ಆರೋಪಿ. ಈತನ ವಿರುದ್ಧ ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡಬಿದಿರೆ, ಕಾರ್ಕಳ, ಉಡುಪಿ, ಸುರತ್ಕಲ್, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿನ ಸುಮಾರು 80ಕ್ಕೂ ಅಧಿಕ ಕಳ್ಳತನ ನಡೆಸಿದ ಆರೋಪಗಳು ಠಾಣೆಗಳಲ್ಲಿ ದಾಖಲಾಗಿದೆ.
ನ.22ರಂದು ರಾತ್ರಿ ಕೆದಿಲ ಗ್ರಾಮದ ರಮ್ಲಾಕುಂಞ ಎಂಬವರ ಮನೆಯಿಂದ ರೂ.2 ಲಕ್ಷ ನಗದು ಹಣ ಮತ್ತು ಕೆದಿಲದ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಎಂಬವರ ಮನೆಯ ಅಂಗಳದಿಂದ ಸ್ಕೂಟಿ ಕಳವಾಗಿತ್ತು. ಕಳವು ಮಾಡಿದ್ದ ಸ್ಕೂಟಿಯನ್ನು ಆರೋಪಿ ಅಲ್ಲಿನ ಗುಡ್ಡ ಪ್ರದೇಶವೊಂದರಲ್ಲಿ ಬಚ್ಚಿಟ್ಟು ಹೋಗಿದ್ದ. ಬಟ್ಟಿಟ್ಟಿದ್ದ ಸ್ಕೂಟಿಯನ್ನು ಸೋಮವಾರ ರಾತ್ರಿ ತೆಗೆದುಕೊಂಡು ಹೋಗಲೆಂದು ಪೆಟ್ರೋಲ್ ಸಮೇತ ಕೆದಿಲಕ್ಕೆ ಬಂದಿದ್ದ ಆರೋಪಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್‍ನನ್ನು ಸ್ಥಳೀಯರ ಮಾಹಿತಿಯಂತೆ ಪುತ್ತೂರು ನಗರ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಡಿ.19ರ ತನಕ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.





