ಪಾಲಕ್ಕಾಡ್ ವಿಭಾಗ ಮಟ್ಟದ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆ

ಮಂಗಳೂರು, ಡಿ.7: ಪಾಲಕಾಡ್ ವಿಭಾಗ ಮಟ್ಟದ ರೈಲ್ವೆ ಬಳಕೆದಾರರ 163ನೇ ಸಲಹಾ ಸಮಿತಿ ಸಭೆಯು ಗುರುವಾರ ನಡೆಯಿತು.
ಮಂಗಳೂರು ವ್ಯಾಪ್ತಿಯ ರೈಲ್ವೆ ಅಭಿವೃದ್ದಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಪ್ರಸ್ತಾವನೆ ಮಂಡಿಸಿದ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಪಾಲಕ್ಕಾಡ್ ವಿಭಾಗ ಬಳಕೆದಾರರ ಸಲಹಾ ಸಮಿತಿ ಸದಸ್ಯ ಹನುಮಂತ ಕಾಮತ್ ‘ಮಂಗಳೂರು ಜಂಕ್ಷನ್‌ನಿಂದ ಸಂಚರಿಸುತ್ತಿರುವ ಮಂಗಳೂರು-ಮುಂಬೈ ಸಿಎಸ್‌ಟಿ ಎಕ್ಸ್‌ಪ್ರೆಸ್, ಮಂಗಳೂರು-ಬೆಂಗಳೂರು ಗೋಮಟೇಶ್ವರ ಎಕ್ಸ್‌ಪ್ರೆಸ್ ಹಾಗೂ ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲುಗಾಡಿಯನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಣೆ ಮಾಡುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಮಂಗಳೂರು-ವಿಜಯಪುರ ರೈಲು ಗಾಡಿಯನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಣೆ ಮಾಡಲಾಗುವುದು. ಈ ರೈಲು ವಿಜಯಪುರದಿಂದ ಮಂಗಳೂರು ಸೆಂಟ್ರಲ್‌ಗೆ ಮಧ್ಯಾಹ್ನ 1ಕ್ಕೆ ಆಗಮಿಸಿ, ಮಧ್ಯಾಹ್ನ 2:35ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ವಿಜಯಪುರಕ್ಕೆ ನಿರ್ಗಮಿಸಲಿದೆ. ಈಗ ಬೆಳಗ್ಗೆ ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7ಕ್ಕೆ ಹೊರಡುವ ಮಂಗಳೂರು-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಗಾಡಿಯನ್ನು ಮಂಗಳೂರು ಸೆಂಟ್ರಲ್‌ಗೆ ಸದ್ಯದಲ್ಲೇ ವಿಸ್ತರಿಸಲಾಗುವುದು ಎಂದರು.
ಸಭೆಯಲ್ಲಿ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಅಹ್ಮದ್ ಬಾವಾ ಪಡೀಲ್ ಮತ್ತಿತರರು ಪಾಲ್ಗೊಂಡಿದ್ದರು.







