ಮೀಸಲು ಜಾಗ ಸಂಬಂಧಿತ ಉದ್ದೇಶಕ್ಕೆ ಬಳಕೆ; ವಿಶೇಷ ಅಭಿಯಾನದ ಮೂಲಕ ಪರಿಶೀಲನೆ: ಎಸಿ ಹರ್ಷವರ್ಧನ

ಮಂಗಳೂರು, ಡಿ.8: ಸಮುದಾಯ ಭವನ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ ಯೋಜನೆ, ಕಾರ್ಯಕ್ರಮಗಳಿಗೆ ಮೀಸಲಿಟ್ಟ ಸರಕಾರಿ ಜಾಗವನ್ನು ಉದ್ದೇಶಿತ ವಿಷಯಕ್ಕೆ ಬಳಕೆ ಮಾಡುವುದು ಹಾಗೂ ಒತ್ತುವರಿ ಆಗದಂತೆ ಬೇಲಿ ಹಾಕಿ ಕಾಪಾಡಿಕೊಳ್ಳುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ಧಾರಿಯಾಗಿರುತ್ತದೆ. ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಇಂತಹ ಜಾಗದ ಪರಿಶೀಲನೆಗೆ ವಿಶೇಷ ಅಭಿಯಾನ ಮಾಡುವುದಾಗಿ ಸಹಾಯಕ ಆಯುಕ್ತ ಹರ್ಷದರ್ದನ ತಿಳಿಸಿದ್ದಾರೆ.
ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಸ್‌ಸಿ ಹಾಗೂ ಎಸ್‌ಟಿ ಕುಂದುಕೊರತೆ ಆಲಿಕೆ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಬೆಳ್ಮ ಗ್ರಾ.ಪಂ.ನಲ್ಲಿ 140 ಎಕರೆ ಸರಕಾರಿಜಮೀನು ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದ ಒತ್ತುವರಿ ಆಗಿದೆ. 12 ವರ್ಷಗಳಲ್ಲಿ ಈ ಪಂಚಾಯತ್‌ನಲ್ಲಿ 33 ಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ನಿವೇಶನ ಒದಗಿಸುವ ಪ್ರಯತ್ನ ಆಗಿಲ್ಲ. ಸರಕಾರಿ ಜಾಗವನ್ನು ಲೇಔಟ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಈ ಪಂಚಾಯತ್‌ನಲ್ಲಿ ಬಡವರು ಹಾಗೂ ಎಸ್‌ಸಿ ಎಸ್‌ಟಿಗಳಿಗೆ ಸ್ಮಶಾನವೇ ಇಲ್ಲ. ಇತ್ತೀಚೆಗೆ ದಲಿತ ಸಮುದಾಯದ ಮಹಿಳೆಯೊಬ್ಬರು ನಿಧನರಾದಾಗ ಅವರ ಮನೆಯ ಮೆಟ್ಟಿಲ ಅಡಿಯಲ್ಲೇ ಮೃತದೇಹವನ್ನು ಹೂತಿರುವ ಪ್ರಸಂಗ ನಡೆದಿದೆ ಎಂದು ದಲಿತ ಮುಖಂಡ ಅಶೋಕ್ ಕೊಂಚಾಡಿ ಗಂಭೀರ ಆರೋಪ ಮಾಡಿದರು.
ಉಳ್ಳಾಲದ ಅಬ್ಬಂಜರ ಎಂಬಲ್ಲಿ 13.8 ಎಕರೆ ಡಿಸಿ ಮನ್ನಾ ಭೂಮಿ ಹಾಗೂ ಚೆಂಬುಗುಡ್ಡೆಯಲ್ಲಿ 1 ಎಕರೆ ಕೊರಗರಿಗಾಗಿ ಮೀಸಲಿಟ್ಟ ಜಾಗ ಒತ್ತುವರಿ ಆಗುತ್ತಿದೆ ಎಂಬ ದೂರುಗಳು ದಲಿತ ಮುಖಂಡರಿಂದ ವ್ಯಕ್ತವಾಯಿತು.
ಈ ಸಂದರ್ಭ ಮಾತನಾಡಿದ ಎಸಿ ಹರ್ಷವರ್ದನ್, ಈ ಪ್ರದೇಶಕ್ಕೆ ಮುಂದಿನ ವಾರ ದಲಿತ ಮುಖಂಡರು ಹಾಗೂ ಅಧಿಕಾರಿಗಳ ಜತೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಐಟಿಡಿಪಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ವಿವಿಧ ಉದ್ದೇಶಗಳಿಗಾಗಿ ಮೀಸಲಿಟ್ಟ ಜಾಗ 2 ವರ್ಷದೊಳಗೆ ಬಳಕೆಯಾಗಬೇಕು. ಅದಕ್ಕೆ ಸೂಕ್ತ ಬೇಲಿ ನಿರ್ಮಾಣ ಮಾಡಿ ಒತ್ತುವರಿ ಆಗದಂತೆ ಸಂರಕ್ಷಣೆ ಮಾಡುವ ಜವಾಬ್ಧಾರಿಯೂ ಸಂಬಂಧಪಟ್ಟ ಇಲಾಖೆಯದ್ದಾಗಿದೆ. ಇಲ್ಲವಾದರೆ ಅಕ್ಕಪಕ್ಕದವರು ಖಾಲಿ ಇದೆ ಎಂಬ ನೆಪದಲ್ಲಿ ಒತ್ತುವರಿ ಮಾಡಿಕೊಳ್ಳುವ ಪ್ರಸಂಗ ನಡೆಯುತ್ತದೆ. ಇದಕ್ಕೆ ಅವಕಾಶ ನೀಡಬಾರದು. ಈಬಗ್ಗೆ ಸಂಬಂಧಪಟ್ಟ ಪಿಡಿಒಗಳಿಗೂ ಸೂಚನೆ ನೀಡುವುದಾಗಿ ಅವರು ಹೇಳಿದರು.
ಅಂಬೇಡ್ಕರ್ ಭವನ ಮುಖ್ಯ ರಸ್ತೆಗೆ ಕಾಣಿಸುತ್ತಿಲ್ಲ
ಉರ್ವಾಸ್ಟೋರ್‌ನಲ್ಲಿ ನಿರ್ಮಾಣವಾಗಿರುವ ದ.ಕ. ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ ಅತ್ಯಂತ ಸುಸಜ್ಜಿತವಾಗಿದ್ದರೂ, ಅದು ಮುಖ್ಯ ರಸ್ತೆಗೆ ಕಾಣಿಸದಂತಿದೆ. ಅಲ್ಲಿ ಭವನ ಇರುವ ಬಗ್ಗೆ ನಾಮಫಲಕವೂ ಕಾಣಿಸುವುದಿಲ್ಲ. ಮುಖ್ಯ ರಸ್ತೆಯಿಂದ ಸೂಕ್ತ ಪ್ರವೇಶದ್ವಾರವನ್ನು ಭವನಕ್ಕೆ ಒದಗಿಸಬೇಕು ಎಂದು ದಲಿತ ನಾಯಕರು ಸಭೆಯಲ್ಲಿ ಆಗ್ರಹಿಸಿದರು.
ನಿವೃತ್ತರನ್ನು ಮತ್ತೆ ನೇಮಕ ಯಾಕೆ?
ಸರಕಾರಿ ಅಧಿಕಾರಿ, ಸಿಬ್ಬಂದಿಯಾಗಿ ನಿವೃತ್ತರಾದವರನ್ನು ಮತ್ತೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಪದವೀಧರರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಯಲ್ಲಿಯೂ ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದನ್ನು ಕೈಬಿಡಬೇಕು ಎಂದು ದಲಿತ ನಾಯಕ ವಿಶ್ವನಾಥ ಬಂಟ್ವಾಳ ಎಂಬವರು ಆಗ್ರಹಿಸಿದರು.
ಮೂರು ತಿಂಗಳಿಗೊಮ್ಮೆ ಸಭೆ ನಡೆಯಲಿ
ಸಹಾಯಕ ಆಯುಕ್ತರ ನೇತೃತ್ವದಲ್ಲಿ ಒಂದು ವರ್ಷದ ಬಳಿಕ ಸಭೆ ನಡೆಯುತ್ತಿದ್ದು, ಅದನ್ನು ಮೂರು ತಿಂಗಳಿಗೊಮ್ಮೆ ನಡೆಬೇಕು ಎಂಬ ಆಗ್ರಹ ಸಭೆಯಲ್ಲಿ ದಲಿತ ಮುಖಂಡರಿಂದ ವ್ಯಕ್ತವಾಯಿತು.
ದಲಿತ ಮುಖಂಡರಾದ ಎಸ್.ಪಿ. ಆನಂದ, ಅನಿಲ್ ಕುಮಾರ್, ರಮೇಶ್ ಕೋಟ್ಯಾನ್, ಚಂದ್ರಪ್ಪ, ಕಾಂತಪ್ಪ ಅಲಂಗಾರು ಮೊದಲಾದವರು ಸಭೆಯಲ್ಲಿ ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ಮಂಗಳೂರು ತಹಶೀಲ್ದಾರ್ ಪ್ರಶಾಂತ್ ವಿ. ಪಾಟೀಲ್, ಮುಲ್ಕಿ- ಮೂಡಬಿದ್ರೆ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಮಂಗಳೂರು ತಾಪಂ ಇಒ ಮಹೇಶ್ ಹೊಳ್ಳ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಅಡಿಗಾರ್ ಉಪಸ್ಥಿತರಿದ್ದರು.







