ದೇರಳಕಟ್ಟೆ: ಕ್ಲಿನಿಕಲ್ ತರಬೇತಿ ಕಾರ್ಯಾಗಾರ

ಕೊಣಾಜೆ: ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ವತಿಯಿಂದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯ ವರ್ಧನೆ ಕುರಿತು ಐಸಿಎಂಆರ್ ಅನುದಾನಿತ ಕ್ಲಿನಿಕಲ್ ತರಬೇತಿ ಕಾರ್ಯಾಗಾರ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಎನ್‌ಯು-ಮೆಡಿಸಿಮ್ ಕೌಶಲ್ಯ ಪ್ರಯೋಗಾಲಯದಲ್ಲಿ ನಡೆಯಿತು.
ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಿಆರ್‌ಎಲ್ ಮತ್ತು ಎಸ್‌ಆರ್‌ಎಲ್ ಪ್ರಯೋಗಾಲಯದ ಉಪಾಧ್ಯಕ್ಷ ರಾದ ಡಾ. ಸತೀಶ್
ಕುಮಾರ್ ಭಂಡಾರಿ, ಇಂತಹ ಕಾರ್ಯಾಗಾರಗಳ ಮೂಲಮ ಕೌಶಲ್ಯಗಳನ್ನು ಹೆಚ್ಚಿಸುವ ಮೂಲಕ ಸ್ಟಾಫ್ ನರ್ಸ್‌ಗಳನ್ನು ಪ್ರೋತ್ಸಾಹಿಸಬೇಕೆಂದು ಹೇಳಿದರು.
ಕ್ಲಿನಿಕಲ್ ತರಬೇತಿ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಕ್ಲೀಟಾ ಪಿಂಟೋ ಸ್ವಾಗತಿಸಿದರು. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಫಾಟಿಮಾ ಡಿಸಿಲ್ವಾ ಅವರು ಐಸಿಎಂಆರ್ ಅನುದಾನವನ್ನು ಪಡೆಯುವಲ್ಲಿಕ್ಲೀಟಾ ಅವರ ಪ್ರಯತ್ನಗಳಿಗಾಗಿ ಅಭಿನಂದಿಸಿದರು ಮತ್ತು ಕಾರ್ಯಾಗಾರವು ದಾದಿಯರ ಕೌಶಲ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಫಾಟಿಮಾ ಡಿಸಿಲ್ವಾ, ಅರಿವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪಾದ್ ಜಿ ಮೆಹಂದಲೆ, ಕಾರ್ಡಿಯಾಲಜಿ ವಿಭಾಗದ ಸಹಮುಖ್ಯಸ್ಥರಾದ ಡಾ.ಬಸವರಾಜ ಉಟಗಿ, ಡಾ. ನಳಿನಿ ಎಂ, ಲತಾ ಎಸ್, ಸರಿತಾ ಟೆಲ್ಮಾ, ಡಾ. ಸುಚಿತ್ರ ಬಿಎಸ್, ಕ್ಲೀಟಾ ಪಿಂಟೋ, ಸುಕೇಶ್ ಶೆಟ್ಟಿ, ಚೇತನ್ ನಾಯ್ಕ್ ತರಬೇತಿ ನೀಡಿದರು.
ಈ ತರಬೇತಿಯಲ್ಲಿ - ತೀವ್ರ ಅನಾರೋಗ್ಯದ ಮೌಲ್ಯಮಾಪನ, ಆಘಾತ, ಉಸಿರಾಟದ ನಿರ್ವಹಣೆ, ಆಘಾತ, ಹೃದಯ ಸ್ತಂಬನ, ವೆಂಟಿಲೇಟರ್ ನಿರ್ವಹಣೆ, ಮತ್ತು ಸಂವಹನ - ಈ ವಿಷಯಗಳ ಕುರಿತು ತರಬೇತಿಯನ್ನು ಪ್ರಾತ್ಯಕ್ಷಿಕೆಯೊಂದಿಗೆ ನಡೆಸಲಾಯಿತು. ರೀಟಾ ಕಾರ್ಯಕ್ರಮ ನಿರೂಪಿಸಿದರು.







