‘ಕೇಶವಾನಂದ ಭಾರತಿ’ ಪ್ರಕರಣದ ತೀರ್ಪು ಮುಂದಿನ ಜನಾಂಗಕ್ಕೆ ಅಧ್ಯಯನ ಯೋಗ್ಯ: ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೆ

ಮಂಗಳೂರು: ಪ್ರಜಾಪ್ರಭುತ್ವದ ಐತಿಹಾಸಿಕ ಮೌಲ್ಯವನ್ನು ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಎತ್ತಿಹಿಡಿದಿತ್ತು. ಸುಪ್ರೀಂ ಕೋರ್ಟ್ ನೀಡಿದ ಈ ತೀರ್ಪಿನಿಂದಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ರಕ್ಷಣೆ ಸಿಕ್ಕಿತು. ಹಾಗಾಗಿ ಈ ತೀರ್ಪು ಮುಂದಿನ ಜನಾಂಗಕ್ಕೆ ಅಧ್ಯಯನಶೀಲವಾಗಿದೆ ಎಂದು ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ಬಾರ್ ಎಸೋಸಿಯೇಶನ್, ಕೇಶವಾನಂದ ಭಾರತಿ ತೀರ್ಪಿನ ಸುವರ್ಣ ಮಹೋತ್ಸವ ಆಚರಣೆ ಸಮಿತಿ ಎಡನೀರು ಮಠ ಹಾಗೂ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಆಶ್ರಯದಲ್ಲಿ ಶನಿವಾರ ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ನಡೆದ ‘ಕೇಶವಾನಂದ ಭಾರತಿ ತೀರ್ಪು-ಭಾರತೀಯ ಸಂವಿಧಾನದ ನ್ಯಾಯತತ್ವದ ಹಿರಿಮೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮುಖ್ಯ ಭಾಷಣಗೈದರು.
ಸಂವಿಧಾನದಲ್ಲಿ ಪ್ರಜಾಪ್ರಭುತ್ವವೇ ಪ್ರಧಾನ ವಹಿಸಲಿದೆ ಎಂದು ಕೇಶವಾನಂದ ಭಾರತಿ ತೀರ್ಪು ಸಾರಿದೆ. ಈ ತೀರ್ಪಿನಲ್ಲಿ ಕೇಶವಾನಂದ ಭಾರತಿ ಸೋತರೂ ತೀರ್ಪು ಇಡೀ ಸಂವಿಧಾನದ ಆಶಯವನ್ನು ಎತ್ತಿಹಿಡಿದೆ. ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವಂತಿಲ್ಲ ಎಂಬುದನ್ನು ಮನದಟ್ಟು ಮಾಡಿದೆ. ಈ ತೀರ್ಪು ನ್ಯಾಯಾಂಗ ಕ್ಷೇತ್ರದಲ್ಲಿ ದೊಡ್ಡ ಮೈಲುಗಲ್ಲಾಗಿದೆ. ಹಾಗಾಗಿ ಸುವರ್ಣ ವರ್ಷಾಚರಣೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಶ್ರೀಧರನ್ ಪಿಳ್ಳೆ ಹೇಳಿದರು.
ಅಶೀರ್ವಚನ ನೀಡಿದ ಎಡನೀರು ಮಠಾಧೀಶ ಸಚ್ಚಾದಾನಂದ ಭಾರತಿ ಸ್ವಾಮೀಜಿ ‘1970ರಲ್ಲಿ ಕೇರಳ ಸರಕಾರ ಭೂಸುಧಾರಣಾ ಕಾಯ್ದೆ ಜಾರಿಗೆ ತಂದಾಗ ಎಡನೀರು ಮಠದ 400 ಎಕರೆ ಭೂಮಿ ಒಕ್ಕಲು ಹೊಂದಿದವರ ಪಾಲಾಯಿತು. ಇದರಿಂದ ಮಠದ ಆದಾಯ ಕುಂಠಿತಗೊಂಡಿತು. ಇದಕ್ಕಾಗಿ ಕೇಶವಾನಂದ ಭಾರತಿ ಸ್ವಾಮೀಜಿ ಭೂಸುಧಾರಣಾ ಕಾಯ್ದೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಆ ಕೇಸನ್ನು ಗೆಲ್ಲಲು ಅವರು ವಿಫಲವಾದರೂ ತೀರ್ಪು ಮಾತ್ರ ಐತಿಹಾಸಿಕವಾಗಿದೆ’ ಎಂದರು.
ನಿಟ್ಟೆ ಸ್ವಾಯತ್ತ ವಿವಿ ಕುಲಪತಿ ಎನ್.ವಿನಯ ಹೆಗ್ಡೆ ಮಾತನಾಡಿ ಸಂವಿಧಾನದ ಮೂಲ ಸಿದ್ಧಾಂತ ಎಲ್ಲಿಯೂ ಬದಲಾವಣೆ ಆಗಿಲ್ಲ, ಆಗುವುದೂ ಇಲ್ಲ ಎಂಬುದನ್ನು ಈ ಪ್ರಕರಣ ತೋರಿಸಿಕೊಟ್ಟಿದೆ. ಸಂವಿಧಾನಕ್ಕೆ ಹಲವು ತಿದ್ದುಪಡಿಗಳಾದರೂ ಮೂಲಭೂತ ಹಕ್ಕುಗಳು ಎಂದಿಗೂ ಸುರಕ್ಷಿತವಾಗಿರುತ್ತದೆ ಎಂಬುದನ್ನು ಈ ತೀರ್ಪು ಸಾಕ್ಷಿಯಾಗಿದೆ ಎಂದರು.
ಸುವರ್ಣ ಮಹೋತ್ಸವ ಆಚರಣೆ ಸಮಿತಿ ಅಧ್ಯಕ್ಷ, ನ್ಯಾಯವಾದಿ ಎಂ. ನಾರಾಯಣ ಭಟ್ ಕಾಸರಗೋಡು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಬಾರ್ ಎಸೋಸಿಯೇಶನ್ ಅಧ್ಯಕ್ಷ ಕೆ.ಪೃಥ್ವಿರಾಜ್ ರೈ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಣ್ಮಕಜೆ, ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ್ ಉಪಸ್ಥಿತರಿದ್ದರು.







