ವಂಚಕ ಕಂಪೆನಿಗಳು ಜನರನ್ನು ದೋಚಲು ಸರಕಾರಗಳ ನೀತಿಗಳೇ ಕಾರಣ: ಮುನೀರ್ ಕಾಟಿಪಳ್ಳ

ಮಂಗಳೂರು: ಜನಸಾಮಾನ್ಯರ ಅಮಾಯಕತೆ, ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ವಂಚಿಸುವ ಹಣಕಾಸು, ಮಾರ್ಕೆಟಿಂಗ್, ಚೈನ್ ಲಿಂಕ್, ಸ್ಕೀಮ್ ಕಂಪೆನಿಗಳು ಕಾನೂನಿನ ಭಯವಿಲ್ಲದೆ ದಿನಕ್ಕೊಂದರಂತೆ ನಗರದಲ್ಲಿ ತಲೆ ಎತ್ತುತ್ತಿವೆ. ಈ ಕಂಪೆನಿಗಳು ಜನರನ್ನು ದೋಚಲು ಸರಕಾರದ ನೀತಿಗಳೇ ಕಾರಣ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು.
ನಗರದ ಜ್ಯೋತಿ ಸಮೀಪದ ಡಾನ್‌ಬಾಸ್ಕೋ ಹಾಲ್‌ನಲ್ಲಿ ಸೋಮವಾರ ನಡೆದ ಪಿಎಸಿಎಲ್ ಕಂಪೆನಿಯಿಂದ ವಂಚಿತ ರಾದ ಸಂತ್ರಸ್ತ ಏಜಂಟರು, ಹೂಡಿಕೆದಾರರ ದ.ಕ.ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಕಂಪೆನಿಗಳ ವೈಭವಯುತ ಕಾರ್ಯಕ್ರಮಗಳಲ್ಲಿ ಸಮಾಜದ ಪ್ರಮುಖರು ಮುಂದಾಲೋಚನೆಯಿಲ್ಲದೆ ಕಾಣಿಸಿಕೊಳ್ಳುವುದು ವಂಚಕ ಕಂಪೆನಿಗಳಿಗೆ ಜನಸಾಮಾನ್ಯರ ನಡುವೆ ವಿಶ್ವಾಸಾರ್ಹತೆಯನ್ನು ಗಳಿಸಲು ಸಹಾಯ ಮಾಡುತ್ತವೆ. ಈ ಕಂಪೆನಿಗಳು ಬಾಗಿಲು ಮುಚ್ಚಿ ಪರಾರಿಯಾಗುವವರೆಗೆ ಕಾನೂನು ಜಾರಿ ಸಂಸ್ಥೆಗಳು ಸಕ್ರಿಯಗೊಳ್ಳ ದಿರುವುದು ಖಂಡನೀಯ. ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮತ್ತು ವಂಚಕ ಕಂಪೆನಿಗಳ ಜಾಲಕ್ಕೆ ಕಡಿವಾಣ ಹಾಕುವ ನಿಯಮ ರೂಪಿಸಲು ಜಿಲ್ಲೆಯ ಸಂಸದ, ಶಾಸಕರು ಮುಂದಾಗಬೇಕಿದೆ ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದರು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಪ್ರಮುಖರಾದ ಯೋಗೀಶ್ ಜಪ್ಪಿನಮೊಗರು, ನವೀನ್ ಕೊಂಚಾಡಿ ಮಾತನಾಡಿದರು.
ಪಿಎಎಸಿಎಲ್ ಏಜೆಂಟರ ಹೋರಾಟ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ತೆಲ್ಮಾ ಮೊಂತೆರೋ, ಅಸುಂತ ಡಿಸೋಜ, ಶಾಲಿನಿ ಡಿಸೋಜ, ಜೇಮ್ಸ್ ಪ್ರವೀಣ್, ಜನಾರ್ದನ ಪುತ್ತೂರು ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಸಮಿತಿಯ ನೂತನ ಅಧ್ಯಕ್ಷರಾಗಿ ಜೇಮ್ಸ್ ಪ್ರವೀಣ್, ಪ್ರಧಾನ ಕಾರ್ಯದರ್ಶಿಯಾಗಿ ತೆಲ್ಮಾ ಮೊಂತೆರೋ, ಖಜಾಂಚಿಯಾಗಿ ಶಾಲಿನಿ ಡಿಸೋಜ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಸುನಿಲ್ ಕುಮಾರ್ ಬಜಾಲ್, ಗೌರವ ಸಲಹೆಗಾರರಾಗಿ ಬಿ.ಕೆ. ಇಮ್ತಿಯಾಝ್, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ನವೀನ್ ಕೊಂಚಾಡಿ ಆಯ್ಕೆಗೊಂಡರು.ಉಪಾಧ್ಯಕ್ಷರಾಗಿ ಅಸುಂತ ಡಿಸೋಜ, ಜನಾರ್ದನ ಪುತ್ತೂರು, ದೇವಿಕಾ, ರಾಮಚಂದ್ರ ಭಟ್, ಜನಾರ್ದನ ಸುಳ್ಯ, ಕಾರ್ಯದರ್ಶಿಗಳಾಗಿ ವಾಯ್ಲೆಟ್ ಪಿಂಟೋ, ಯಶೋಧಾ ಬೆಳ್ತಂಗಡಿ, ಮೋಲಿ ಡಿಸೋಜ, ಅರುಣಾ ಕೋಟ್ಯಾನ್, ಸುನೀತಾ ರೋಡ್ರಿಗಸ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಗೆ 15 ಮಂದಿಯನ್ನು ಆರಿಸಲಾಯಿತು.







