‘ದ.ಕ.ಜಿಲ್ಲಾಧಿಕಾರಿ ಕಚೇರಿ ಚಲೋ’ ಪ್ರಚಾರಾರ್ಥ ವಾಹನ ಚಾಥಾಕ್ಕೆ ಚಾಲನೆ

ಮಂಗಳೂರು, ಡಿ.14: ಸಿಪಿಎಂ ದ.ಕ.ಜಿಲ್ಲಾ ಸಮಿತಿಯು ಡಿ.19ರಂದು ಹಮ್ಮಿಕೊಂಡಿರುವ ‘ಜಿಲ್ಲಾಧಿಕಾರಿ ಕಚೇರಿ ಚಲೋ’ ಹೋರಾಟದ ಪ್ರಚಾರಾರ್ಥವಾಗಿ ಗುರುವಾರ ನಡೆದ ಮಂಗಳೂರು ನಗರ ಮಟ್ಟದ ವಾಹನ ಪ್ರಚಾರ ಜಾಥಾಕ್ಕೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ಸುನೀಲ್ ಕುಮಾರ್ ಬಜಾಲ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ದ.ಕ.ಜಿಲ್ಲೆಯ ಪ್ರಪ್ರಥಮ ಸಂಸದ ಉಳ್ಳಾಲ ಶೀನಿವಾಸ ಮಲ್ಯ ತನ್ನ 18 ವರ್ಷಗಳ ಕಾಲಾವಧಿಯಲ್ಲಿ ಸುರತ್ಕಲ್ ಎನ್‌ಐಟಿಕೆ ಇಂಜಿನಿಯರಿಂಗ್ ಕಾಲೇಜ್, ಎನ್‌ಎಂಪಿಟಿ, ಎಂಸಿಎಫ್, ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಪುರಭವನ, ಎರಡು ರಾಷ್ಟ್ರೀಯ ಹೆದ್ದಾರಿಗಳ ಸಹಿತ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. 1989ರ ಬಳಿಕ 9 ಚುನಾವಣೆಯಲ್ಲಿ ಗೆದ್ದ ಬಿಜೆಪಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿಲ್ಲ ಎಂದು ಆರೋಪಿಸಿದರು.
ಸಿಪಿಎಂ ಜಿಲ್ಲಾ ನಾಯಕಿಯರಾದ ಭಾರತಿ ಬೋಳಾರ, ಪ್ರಮೀಳಾ ಶಕ್ತಿನಗರ, ಅಸುಂತಾ ಡಿಸೋಜ, ನಾಯಕರಾದ ಯೋಗೀಶ್ ಜಪ್ಪಿನಮೊಗರು, ಜಗದೀಶ್ ಬಜಾಲ್, ಸಾದಿಕ್ ಮುಲ್ಕಿ, ಆಸಿಫ್ ಭಾವ ಭಾಗವಹಿಸಿದ್ದರು.





