ಆಳ್ವಾಸ್ ವಿರಾಸತ್‌ನಲ್ಲಿ ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ

ವಿದ್ಯಾಗಿರಿ (ಮೂಡುಬಿದಿರೆ), ಡಿ.15: ಮರಿಗೆ ಗುಟುಕು ಆಹಾರ ನೀಡುವ ಹಕ್ಕಿ, ನೀರಿನಿಂದ ಹಾರಿ ಮರಿ ಬರುವುದನ್ನು ವೀಕ್ಷಿಸುವ ತಾಯಿ ಹುಲಿ, ಮರಿಗಾಗಿ ಬೇಟೆಯಾಡುವ ಸಿಂಹ, ಮರಿಯನ್ನು ಮುದ್ದಿಡುವ ನರಿ ಹೀಗೆ ತಾಯಿ ಪ್ರೀತಿಯು ಪ್ರಾಣಿ-ಪಕ್ಷಿಗಳಲ್ಲೂ ಇವೆ ಎಂಬುದಾಗಿ ಸಾರುವ ಛಾಯಾಚಿತ್ರಗಳ ಪ್ರದರ್ಶನವು ಆಳ್ವಾಸ್ ವಿರಾಸತ್‌ನಲ್ಲಿ ಶುಕ್ರವಾರ ವ್ಯಕ್ತವಾಯಿತು.
ವಿರಾಸತ್ ಅಂಗವಾಗಿ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಪ್ರಥಮ ಬಹುಮಾನ ಪಡೆದ ಮಧುಸೂಧನ ಅವರ ‘ಇಲಿ ಹಿಡಿದ ಗೂಬೆ’, ದ್ವಿತೀಯ ಸ್ಥಾನ ಪಡೆದ ಡಾ.ಅಜಿತ್ ಹುಯಿಲಗೋಳ ಅವರ ‘ನೀರು ಹಾರುವ ಹುಲಿ ಮರಿ’ ಹಾಗೂ ತೃತೀಯ ಸ್ಥಾನ ಪಡೆದ ಪ್ರಮೋದ್ ಗೋವಿಂದ ಶಾನುಭಾಗ್ ಅವರ ‘ಆಹಾರ ಸೇವಿಸುವ ಹಿಮಕರಡಿ’ಯು ವಿರಾಸತ್‌ನ ಮೆರುಗು ಹೆಚ್ಚಿಸಿತು.
ಖ್ಯಾತ ಛಾಯಾಗ್ರಾಹಕರಾದ ಎಂ.ಎನ್. ಜಯಕುಮಾರ್, ಜಯಂತ್ ಶರ್ಮಾ, ಯಜ್ಞ ಮಂಗಳೂರು, ಹರಿ ಸೋಮ ಶೇಖರ್, ವಿಜಯ್ ಕುಮಾರ್, ಅವಿನಾಶ್ ಕಾಮತ್, ಡಾ. ಪ್ರಮೋದ್ ಶಾನುಭಾಗ್, ಆಶಾ ಜಯಕುಮಾರ್, ಪುನರ್ವಸ ಜಯಕುಮಾರ್, ಆರ್. ಅನಂತಮೂರ್ತಿ, ಕೆ.ಪಿ. ಮಾರ್ಟಿನ್, ಜಿನೇಶ ಪ್ರಸಾದ್ ಮೂಡುಬಿದಿರೆ, ಅಶೋಕ್ ಮನ್ಸೂರ್, ರವಿಕಿರಣ್ ಬಾದಾಮಿ, ಇಂದ್ರಕುಮಾರ್ ದಸ್ತೆಣ್ಣವರ್, ಪ್ರಮೋದ್ ಚಕ್ರವರ್ತಿ, ಸ್ಟೀಫನ್, ನವೀನ್ ಕುಮಾರ್, ಸಂತೋಷ್ ವೈ. ಹಂಜಗಿ, ಎಂ.ಸಿ. ಶೇಖರ್ ಹೈದರಾಬಾದ್, ಡಾ. ಅಖ್ತರ್ ಹುಸೈನ್, ಕೃಪಾಕರ ಸೇನಾನಿ, ಅಶೋಕ್ ಕುಮಾರ್ ಟಿ., ಸತೀಶ್‌ಲಾಲ್ ಅಂಧೇಕರ್, ಆಸ್ಟ್ರೋ ಮೋಹನ್, ಕೀರ್ತಿ ಮಂಗಳೂರು, ದಾಮೋದರ ಸುವರ್ಣ ಮತ್ತಿತರರ ಛಾಯಾಚಿತ್ರಗಳೂ ಗಮನ ಸೆಳೆಯುತ್ತಿವೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಲಕ್ಷ್ಮಿ ಮಷೀನ್ ವರ್ಕ್ಸ್ ಕೊಯಮುತ್ತುರ್, ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿ ಹಾಗೂ ಫೋಟೋ ಜರ್ನಲಿಸ್ಟ್ ಅಸೋಸಿಯೇಶನ್, 7 ಶೇಡ್ಸ್ ತಂಡಗಳು ಸಹಯೋಗ ನೀಡಿರುವ ಈ ಪ್ರದರ್ಶನದಲ್ಲಿ 2,000ಕ್ಕೂ ಅಧಿಕ ವನ್ಯಜೀವಿ ಛಾಯಾಚಿತ್ರಗಳು ಜನರ ಕಣ್ಮನ ಸೆಳೆಯುತ್ತಿವೆ.







