ಪರಿಸರ ಜಾಗೃತಿಗಾಗಿ ಉತ್ತರ ಪ್ರದೇಶದ ಯುವಕ ರಾಬಿನ್ ಸಿಂಗ್ ಸೈಕಲ್ ಜಾಥಾ
ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ನಿರ್ಮೂಲನೆಗಾಗಿ ದೇಶದಾದ್ಯಂತ ಪಯಣ

ಪುತ್ತೂರು: ಪರಿಸರ ಸಂರಕ್ಷಣೆಗಾಗಿ ಇಂದು ಜಗತ್ತಿನಾದ್ಯಂತ ಹಲವು ರೀತಿಯ ಜಾಗೃತಿ ಹೋರಾಟಗಳು ನಡೆಯುತ್ತಿದೆ. ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳು ನಮ್ಮ ಪರಿಸರ, ನಮ್ಮ ಭೂಮಿ ಸಹಿತ ಎಲ್ಲಾ ಜೀವಜಂತುಗಳನ್ನು ನಾಶ ಮಾಡುವ ಹಂತಕ್ಕೆ ತಲುಪಿದೆ. ಪ್ಲಾಸ್ಟಿಕ್ ತ್ಯಾಜ್ಯ ಭೂಮಿಯಲ್ಲಿ ಮಣ್ಣಾಗದು, ನೀರಿನಲ್ಲಿ ಕರಗದು, ಬೆಂಕಿಯಲ್ಲಿ ಸುಟ್ಟು ಹೋಗದು. ಭೂಮಿಗೆ ಎಸೆದರೆ ಭೂಮಿಯ ನಾಶ, ಪರಿಸರಕ್ಕೆ ಎಸೆದರೆ ಪರಿಸರದ ನಾಶ, ಸುಟ್ಟು ಹಾಕಿದರೆ ಅದರ ಹೊಗೆ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ಇಂತಹ ಪ್ಲಾಸ್ಟಿಕ್‍ನ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವಕನೋರ್ವ ಸೈಕಲ್ ಜಾಥಾ ನಡೆಸಿ ದೇಶದಾದ್ಯಂತ ಪರ್ಯಟನೆ ನಡೆಸುತ್ತಿದ್ದಾರೆ.
ತಾನು ಹೋದ ಪ್ರದೇಶಗಳಲ್ಲಿನ ಶಾಲೆ ಕಾಲೇಜುಗಳಿಗೆ ತೆರಳಿ ಜನರಿಗೆ ಪ್ಲಾಸ್ಟಿಕ್ ಅಪಾಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ತನ್ನ ಅಭಿಯಾನಕ್ಕೆ ಆತ `ಹಸಿರು ಭಾರತ ಚಳುವಳಿ'(ಗ್ರೀನ್ ಇಂಡಿಯಾ ಮೂಮೆಂಟ್) ಎಂಬ ಹೆಸರಿಟ್ಟುಕೊಂಡು ಮುನ್ನಡೆಯುತ್ತಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಇಟವಾ ಎಂಬಲ್ಲಿನ ನಿವಾಸಿ ರಾಬಿನ್ ಸಿಂಗ್ ಈ ಅಭಿಯಾನ ನಡೆಸುತ್ತಿರುವ ಯುವಕ. 2022ರ ಅಕ್ಟೋಬರ್ ತಿಂಗಳಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಸೈಕಲ್ ಮೂಲಕ ದೇಶ ಪರ್ಯಟನೆ ಆರಂಭಿಸಿರುವ ರಾಬಿನ್ ಸಿಂಗ್ ಈಗಾಗಲೇ ಉತ್ತರ ಮತ್ತು ದಕ್ಷಿಣ ಭಾರತದ ಬಹುತೇಕ ರಾಜ್ಯಗಳನ್ನು ಕ್ರಮಿಸಿರುವ ರಾಬಿನ್ ಸಿಂಗ್ ಇದೀಗ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ. ತಾನು ಹೋದ ಕಡೆಯಲೆಲ್ಲಾ ಶಾಲಾ-ಕಾಲೇಜುಗಳ ಬಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಹಾಗೂ ಯುವಜನತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಮತ್ತು ಪ್ಲಾಸ್ಟಿಕ್ ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈಗಾಗಲೇ ಹಲವು ರಾಜ್ಯಗಳನ್ನು ದಾಟಿರುವ ಈ ವ್ಯಕ್ತಿಯ ಸೈಕಲ್ ಪರ್ಯಟನೆ 2024 ರ ಮಾರ್ಚ್ ತಿಂಗಳಲ್ಲಿ ಮಧ್ಯಪ್ರದೇಶದ ಭೂಪಾಲ್‍ನಲ್ಲಿ ಕೊನೆಯಾಗಲಿದೆ ಎನ್ನುತ್ತಾರೆ ರಾಬಿನ್ ಸಿಂಗ್.
ದಕ್ಷಿಣ ಕನ್ನಡದ ಯಾತ್ರೆ ಮುಗಿಸಿ ಬಳಿಕ ತೆಲಂಗಾಣ ರಾಜ್ಯಕ್ಕೆ ಪ್ರಯಾಣ ಬೆಳೆಸಲಿರುವ ರಾಬಿನ್ ಸಿಂಗ್ 2024 ಮಾರ್ಚ್ ತಿಂಗಳಿನಲ್ಲಿ ಮಧ್ಯಪ್ರದೇಶದ ಭೂಪಾಲ್‍ಗೆ ತಲುಪಲಿದ್ದಾರೆ. ಭೂಪಾಲ್‍ನಲ್ಲಿ ತನ್ನ ಸೈಕಲ್ ಮೂಲಕ ನಡೆಸುವ ಪರಿಸರ ಜಾಗೃತಿಯನ್ನು ಸಮಾಪ್ತಿಗೊಳಿಸಲಿದ್ದಾರೆ. ಈಗಾಗಲೇ ರಾಬಿನ್ ಸಿಂಗ್ ಸಾವಿರಾರು ಕಿಲೋಮೀಟರ್ ಸೈಕಲ್ ನಲ್ಲಿ ಕ್ರಮಿಸಿದ್ದು, ವಿವಿಧ ರಾಜ್ಯಗಳನ್ನು ಸಂದರ್ಶಿಸಿದ್ದಾರೆ.
"ಪ್ಲಾಸ್ಟಿಕ್ ಅದರಲ್ಲೂ ಮೈಕ್ರೋ ಪ್ಲಾಸ್ಟಿಕ್ ಗಳು ಇಂದು ಮಾನವ ದೇಹದ ಮೇಲೆ ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಇಂತಹ ಪ್ಲಾಸ್ಟಿಕ್ ಗಳ ನಿರ್ಮೂಲನೆಯಾಗದೇ ಹೋದಲ್ಲಿ ಇಡೀ ಜೀವಸಂಕುಲವೇ ನಾಶವಾಗುವ ಅಪಾಯಗಳಿವೆ. ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾನು ಗ್ರೀನ್ ಇಂಡಿಯಾ ಮೂಮೆಂಟ್ ಹೆಸರಿನಲ್ಲಿ ಸೈಕಲ್ ಮೂಲಕ ಜಾಗೃತಿ ಪರ್ಯಟನೆ ನಡೆಸುತ್ತಿದ್ದೇನೆ. ನನ್ನ ಪರಿಸರ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಲಿದೆ".
-ರಾಬಿನ್ ಸಿಂಗ್, ಗ್ರೀನ್ ಇಂಡಿಯಾ ಮೂಮೆಂಟ್







