ಚಾರುದತ್ತ ಆಫಳೆ ಬುವಾಗೆ ಅಚ್ಯುತಶ್ರೀ ರಾಷ್ಟ್ರೀಯ ಪುರಸ್ಕಾರ ಪ್ರದಾನ

ಮಂಗಳೂರು : ಪ್ರತಿ ವರ್ಷ ಕಥಾಕೀರ್ತನ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ನೀಡಲಾಗುವ ‘ಅಚ್ಯುತಶ್ರೀ’ ರಾಷ್ಟ್ರೀಯ ಪುರಸ್ಕಾರಕ್ಕೆ ಈ ಬಾರಿ ಮಹಾರಾಷ್ಟ್ರದ ಪುಣೆಯ ಹರಿದಾಸ ಚಾರುದತ್ತ ಆಫಳೆ ಬುವಾ ಭಾಜರಾಗಿದ್ದಾರೆ.
ಕಥಾ ಕೀರ್ತನದ ಮೇರು ನಾಡೋಜ ಸಂತ ಭದ್ರಗಿರಿ ಅಚ್ಯುತದಾಸರು ಹಾಗೂ ಕೀರ್ತನಾಚಾರ್ಯ ಲಕ್ಷ್ಮಣದಾಸ್ ವೇಲಣಕರ್ ಅವರ ಸ್ಮರಣಾರ್ಥ ಷಡ್ಜಕಲಾ ಕೇಂದ್ರ ಹಾಗೂ ರಾಮಕೃಷ್ಣ ಮಠ ಜಂಟಿಯಾಗಿ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ‘ಕಥಾಕೀರ್ತನ ವೈಭವ’ ಸಮಾರಂಭದಲ್ಲಿ ಚಾರುದತ್ತ ಆಫಳೆ ಬುವಾ ಅವರಿಗೆ ‘ ಅಚ್ಯುತಶ್ರೀ’ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು.
ಇದೇ ವೇಳೆ ನಾಡಿನ ಖ್ಯಾತ ಹರಿದಾಸ ಪೊಳಲಿ ಜಗದೀಶದಾಸರು ರಚಿಸಿದ ‘‘ಸುವರ್ಣ ಸಿರಿ -ದೃಷ್ಟಾಂತ ಕಥಾಕೀರ್ತನ’’ ಗ್ರಂಥದ ಲೋಕಾರ್ಪಣೆಗೊಳಿಸಲಾಯಿತು. ಬಳಿಕ ಹರಿಕಥಾ ಕ್ಷೇತ್ರದಲ್ಲಿ ೫೦ ವಸಂತಗಳನ್ನು ಪೂರೈಸುತ್ತಿರುವ ಪೊಳಲಿ ಜಗದೀಶದಾಸರು ಹಾಗೂ ಹರಿಕಥಾ ಕಲಾ ಸೇವೆಗೈದ ಎಂ. ಲಕ್ಷ್ಮೀನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಂಗಳೂರಿನ ಹರಿಕಥಾ ಪರಿಷತ್ತಿನ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ವೈಭವಿ ಕುಂಬ್ಳೆ ಪಾಶುಪತ ಪ್ರದಾನ ಹರಿಕಥೆ ಪ್ರಸ್ತುತಪಡಿಸಿದರು.
ಷಡ್ಜ ಕಲಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ದತ್ತಾತ್ರೇಯ ವೇಲಣಕರ್ ಡಾ. ದತ್ತಾತ್ರೇಯ ವೇಲಣಕರ್ ಪಾಸ್ತಾವಿಕವಾಗಿ ಮಾತನಾಡಿದರು. ಹರಿದಾಸ ಎಸ್. ಪಿ.ಗುರುದಾಸ್ ಕಾರ್ಯಕ್ರಮದ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಚಾರುದತ್ತ ಆಫಳೆ ಬುವಾ ನಾರದೀಯ ಶೈಲಿಯಲ್ಲಿ ಸಂತ ನಾಮದೇವ ಜೀವನ ಆಧಾರಿತ ಹರಿಕಥೆ ನಡೆಸಿಕೊಟ್ಟರು. ಅವರಿಗೆ ತಬಲಾದಲ್ಲಿ ಶ್ರೀದತ್ತ ಪ್ರಭು ಹಾಗೂ ಹಾರ್ಮೋನಿಯಂನಲ್ಲಿ ಗೋಪಾಲ್ ಪ್ರಭು ಸಮರ್ಥ ಸಾಥ್ ನೀಡಿದರು.







