ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹಾರಥೋತ್ಸವ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಸೋಮವಾರ ಮುಂಜಾನೆ ಭಕ್ತಜನರ ಸಮ್ಮುಖದಲ್ಲಿ ಭಕ್ತಿ ಸಂಭ್ರಮದ ಚಂಪಾಷಷ್ಠಿ ಮಹಾರಥೋತ್ಸವ ಸುಸಂಪನ್ನವಾಯಿತು.
ಧನುರ್‌ಲಗ್ನ ಸುಮುಹೂರ್ತದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾದರು.ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಉತ್ಸವದ ವಿವಿಧ ವೈಧಿಕ ವಿದಿವಿಧಾನ ನೆರವೇರಿಸಿದರು. ಸಹಸ್ರಾರು ಭಕ್ತರ ಜಯಘೋಷದ ನಡುವೆ ಭಕ್ತಿಯಿಂದ ಭಕ್ತರು ಶ್ರೀ ದೇವರ ಮಹಾರಥವನ್ನು ಎಳೆದರು.
ವರ್ಷದಲ್ಲಿ ಒಂದು ಬಾರಿ ಮಾತ್ರ ಸೇವೆ ನೆರವೇರಿಸಲು ಅವಕಾಶವಿರುವ ಮಾತ್ರ ನಡೆಯುವ ಬ್ರಹ್ಮರಥೋತ್ಸವ ಸೇವೆಯನ್ನು 148 ಭಕ್ತರು ಸಲ್ಲಿಸಿದ್ದರು.ಬ್ರಹ್ಮರಥೋತ್ಸವ ಸೇವೆ ಸಲ್ಲಿಸಿದ ಭಕ್ತರಿಗೆ ರಥ ಎಳೆಯಲು ಅನುಕೂಲವಾಗು ವಂತೆ ವಿಶೇಷ ಪಾಸ್ ಅನ್ನು ನೀಡಲಾಗಿತ್ತು. ಅಲ್ಲದೆ ಬ್ರಹ್ಮರಥ ಎಳೆಯುವ ಸಂದರ್ಭ ಅನವಶ್ಯಕ ಗೊಂದಲ ನಿವಾರಿಸಲು ಸಲುವಾಗಿ ರಥ ಎಳೆಯುವ ಭಕ್ತರಿಗೆ ಪಾಸ್‌ಗಳನ್ನು ನೀಡಲಾಗಿತ್ತು.ಇದರಿಂದ ಬ್ರಹ್ಮರಥೋತ್ಸವವು ಅಚ್ಚುಕಟ್ಟಾಗಿ ಸಂಪನ್ನವಾಯಿತು. ಸಹಸ್ರಾರು ಭಕ್ತರು ಶ್ರೀ ದೇವರ ವೈಭವದ ರಥೋತ್ಸವ ವೀಕ್ಷಿಸಿ ಕೃತಾರ್ಥರಾದರು.
ಮೊದಲು ದೇವಳದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ಆನಂತರ ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಸಾಲಾಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಬೆಳಗ್ಗೆ 7.33ರ ಧನುರ್ ಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಬ್ರಹ್ಮರಥಾರೂಢರಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು. ತದನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾ ಮಂಗಳಾರತಿ ನೆರವೇರಿತು.
ಪೂಜೆಯ ಬಳಿಕ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಶ್ರೀದೇವರಿಗೆ ಸುವರ್ಣವೃಷ್ಠಿಗೈದರು. ಬಳಿಕ ಭಕ್ತಾಧಿಗಳಿಗೆ ಧನ, ಕನಕ, ಹೂವು, ಫಲವಸ್ತು ಪ್ರಸಾದಗಳನ್ನು ರಥದಿಂದ ಭಕ್ತರತ್ತ ಎಸೆದರು. ಭಕ್ತಾಧಿಗಳು ನಾಣ್ಯ, ಕಾಳು ಮೆಣಸು, ಸಾಸಿವೆಗಳನ್ನು ರಥಕ್ಕೆ ಎಸೆದರು. ಬಳಿಕ ಪ್ರಥಮವಾಗಿ ಪಂಚಮಿ ರಥೋತ್ಸವ ನೆರವೇರಿತು. ನಂತರ ಭಕ್ತ ಜನರ ಬಹುಪರಾಕಿನೊಂದಿಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ನಡೆಯಿತು. ವರ್ಷದಲ್ಲಿ ಒಂದು ಬಾರಿ ಮಾತ್ರ ಎಳೆಯುವ ಮಹಾರಥೋತ್ಸವವನ್ನು ಮತ್ತು ಬ್ರಹ್ಮರಥಾರೂಢರಾದ ಶ್ರೀ ದೇವರ ದರುಶನವನ್ನು ಸಹಸ್ರಾರು ಭಕ್ತಾಧಿಗಳು ಪಡೆದರು. ಭಕ್ತಿ ಮತ್ತು ಸಡಗರದ ಸಮ್ಮಿಲನದಲ್ಲಿ ರಥಬೀದಿಯಲ್ಲಿ ಸಾಗಿ ಬಂದ ರಾಜಗಂಭರ‍್ಯದ ಬ್ರಹ್ಮರಥವು ಭಕ್ತರ ಭಯಭಕ್ತಿಯ ಸಮ್ಮಿಶ್ರದ ನಡುವೆ ಸುಸಂಪನ್ನವಾಯಿತು.
ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಮಯೂರ ವಾಹನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಮತ್ತು ಉಮಾಮಹೇಶ್ವರ ದೇವರಿಗೆ ಪೂಜೆ ನಡೆಯಿತು. ಶ್ರೀ ದೇವರು ಗರ್ಭಗುಡಿಗೆ ಪ್ರವೇಶಿಸಿದ ನಂತರ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಮೂಲಪ್ರಸಾದ ವಿತರಿಸಿದರು. ಬ್ರಹ್ಮರಥ ಹರಕೆ ಸೇವೆ ಸಲ್ಲಿಸಿದವರಿಗೆ ಪ್ರಧಾನ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.
ಶ್ರೀ ದೇವರ ಬ್ರಹ್ಮರಥವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಪೋಲೀಸ್ ವರಿಷ್ಠಾಧಿಕಾರಿ ಋಷ್ಯಂತ್, ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಗಿರೀಶ್ ನಂದನ್ ದಾನಿಗಳಲ್ಲಿ ಓರ್ವರಾದ ಯುವ ಉದ್ಯಮಿ ಅಜಿತ್ ಶೆಟ್ಟಿ ಕಡಬ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸೇರಿದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರು, ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.







