ಸುಜ್ಲಾನ್ ಕಂಪೆನಿಯಲ್ಲಿ ಭೂಮಾಫಿಯಾ: ವಿನಯ್ ಕುಮಾರ್ ಸೊರಕೆ ಆರೋಪ
ಡಿ. 23ರಂದು ಸುಜ್ಲಾನ್ ಗೇಟ್ ಮುಂಭಾಗ ಪ್ರತಿಭಟನೆ

ಪಡುಬಿದ್ರಿ: ವ್ಯಾಪ್ತಿಯಲ್ಲಿ ಕೆಲವು ವರ್ಷಗಳ ಹಿಂದೆ ಆರಂಭಗೊಂಡ ಸುಜ್ಲಾನ್ ಎನರ್ಜಿ ಇಂಡಿಯಾ ಕಂಪನಿಯು ನಷ್ಟ ಅನುಭವಿಸಿದ ಬಳಿಕ ಕೆಐಎಡಿಬಿ ಮೂಲಕ ಪಡೆದ 1200ಕ್ಕೂ ಅಧಿಕ ಭೂಮಿಯನ್ನು ಭೂಮಾಫಿಯಾದ ಜತೆ ಶಾಮೀಲಾಗಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದೆ ಎಂದು ಆರೋಪಿಸಿ ವಿವಿಧ ಸಂಘ ಸಂಸ್ಥೆಗಳ ಜತೆಗೂಡಿ ಡಿಸೆಂಬರ್ 23ರಂದು 10 ಗಂಟೆಗೆ ಪಕ್ಷಾತೀತ ನೆಲೆಯಲ್ಲಿ ನಂದಿಕೂರು ಬಳಿಯ ಸುಜ್ಲಾನ್ ಗೇಟ್ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಮಂಗಳವಾರ ಕಾಪು ಪ್ರೆಸ್ ಕ್ಲಬ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸುಜ್ಲಾನ್ ಕಂಪನಿಯು ತೀವ್ರ ನಷ್ಟ ಅನುಭವಿಸಿದಾಗ ಎಸ್ಪಾನ್ ಹೆಸರಲ್ಲಿ ನೂರಾರು ಎಕರೆ ಜಮೀನನ್ನು ಆಸ್ಪಿನ್, ತ್ರಿಶೂಲ್, ಚೈನ್ಸ್ ಟುಬ್ ಆಂಡ್ ಪೈಪ್ ಪ್ರೈವೇಟ್ ಲಿಮಿಟೆಡ್, ಹೆಕ್ಸಾ ನ್ಯಾಚುರಲ್, ಎಂ11 ಇಂಡಸ್ಟ್ರೀಸ್, ಪಾಮಾಯಿಲ್ ಮುಂತಾದ ಕಂಪನಿಗಳಿಗೆ ಅಧಿಕ ದರದಲ್ಲಿ ಮಾರಾಟ ಮಾಡಿದ್ದಾರೆ. ಆ ಪೈಕಿ ಕೆಲವು ಕಂಪನಿಗಳು ಪ್ರಾರಂಭಗೊಂಡಿದ್ದರೂ ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ. ಅಲ್ಲದೆ ಅದೇ ಭಾಗದಲ್ಲಿರುವ 100 ಎಕರೆ ವಿಸ್ತೀರ್ಣದ ಪ್ರಸಿದ್ಧ ದೇವರ ಕಾಡು ಪ್ರದೇಶವನ್ನೂ ಸಂರಕ್ಷಿಸದೆ ಮಾರಾಟ ಮಾಡಿದ್ದಾರೆ ಎಂದರು.
ನಿವೇಶನಕ್ಕೆ ಜಾಗ ಇಲ್ಲ: ಕಾಪು ಕ್ಷೇತ್ರದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಮನೆ ನಿವೇಶನ ಕೋರಿ ಅರ್ಜಿ ಸಲ್ಲಿಸಿದವರಿದ್ದಾರೆ. ಅವರಿಗೆ ನೀಡಲು ಭೂಮಿ ಇಲ್ಲ. ಹಾಗಾಗಿ ಸುಜ್ಲಾನ್ ಜಾಗವನ್ನು ಸರಕಾರ ವಶಪಡಿಸಿಕೊಂಡು ನಿವೇಶನರಹಿತರಿಗೆ ಹಂಚಬೇಕು. ಈ ಬಗ್ಗೆ ಮುಖ್ಯಮಂತ್ರಿ, ಸಂಬಂಧಿತ ಸಚಿವರು, ಸಂಬಂಧಿತ ಅಧಿಕಾರ ವರ್ಗದವರಿಗೆ ಮನವಿ ಸಲ್ಲಿಸಲಾಗುವುದು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಕೃಷಿ ಉದ್ದೇಶಕ್ಕಾಗಿ ಪಲಿಮಾರು ಬಳಿ ನಿರ್ಮಿಸಿದ ಕಿಂಡಿ ಅಣೆಕಟ್ಟುವಿನಿಂದ ನಂದಿಕೂರು, ಕಿರ್ನಿರೆ, ಬಳ್ಕುಂಜೆ, ಮುಂಡ್ಕೂರು, ಫಲಿಮಾರು, ಇನ್ನಾ ಪರಿಸರದ ಕೃಷಿಕರಿಗೆ ಹೆಚ್ಚು ಅನುಕೂಲವಾಗಿತ್ತು. ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಳಳವೂ ಆಗಿತ್ತು. ಇದೀಗ ಈ ಕಿಂಡಿ ಅಣೆಕಟ್ಟಿನಿಂದ ಬೃಹತ್ ಕೊಳವೆ ಮೂಲಕ ಸುಜ್ಲಾನ್ ಜಾಗದಲ್ಲಿ ಸ್ಥಾಪನೆಗೊಂಡ ಕೈಗಾರಿಕೆಯೊಂದಕ್ಕೆ ನೀರು ಪೂರೈಸಲು ನಿರ್ಧರಿಸಿರುವುದರಿಂದ ಕೃಷಿಕರಿಗೆ ಸಮಸ್ಯೆ ಆಗುತ್ತದೆ ಎಂದು ಅವರು ಹೇಳಿದರು.
ಟೋಲ್ ವಿರುದ್ಧ ಪ್ರತಿಭಟನೆ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಬಳಿ ಟೋಲ್ ಸಂಗ್ರಹ ಕೇಂದ್ರ ಸ್ಥಾಪಿಸವ ಬಗ್ಗೆ ಹುನ್ನಾರ ನಡೆಯುತಿದ್ದು, ಇದನ್ನು ಕೈಬಿಡಬೇಕು ಎಂದು ಸೊರಕೆ ಒತ್ತಾಯಿಸಿದರು. ಈಗಾಗಲೇ ಹೆಜಮಾಡಿಯಲ್ಲಿ ಟೋಲ್ ಕೇಂದ್ರ ಇದ್ದು, ಮತ್ತೆ ಕಂಚಿನಡ್ಕದಲ್ಲಿ ನಿರ್ಮಾಣವಾಗುವುದರಿಂದ ಈ ಭಾಗದ ಜನರಿಗೆ ಇನ್ನಷ್ಟು ಸಮಸ್ಯೆ ಉಂಟಾಗಲಿದೆ ಎಂದು ಅವರು ಹೇಳಿದರು.
ಹೆಜಮಾಡಿ ಟೋಲ್‍ನಲ್ಲಿ ಸ್ಥಳೀಯ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ ಅಡ್ವೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಿನೇಶ್ ಕೋಟ್ಯಾನ್ ಪಲಿಮಾರು, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸರ್ಫುದ್ದೀನ್, ಕಾಪು ಪುರಸಭೆ ವ್ಯಾಪ್ತಿ ಅಧ್ಯಕ್ಷ ಸಾದಿಕ್ ಉಪಸ್ಥಿತರಿದ್ದರು.







