ಮುಂದಿನ ಮೂರು ತಿಂಗಳಲ್ಲಿ ಮನೆ ಮನೆಗೆ ಗ್ಯಾಸ್ ಪೂರೈಕೆ: ಆರ್.ಕೆ. ಜೈನ್

ಸುರತ್ಕಲ್: ಕರಾವಳಿಯಲ್ಲಿ ಮುಂದಿನ 2-3 ತಿಂಗಳಲ್ಲಿ ಗೇಲ್ ಇಂಡಿಯಾ ಗ್ಯಾಸ್ ಸಂಪರ್ಕವು ಮನೆಗಳಿಗೆ ತಲುಪಲಿದೆ ಎಂದು ಗೇಲ್ ಇಂಡಿಯಾದ ಆರ್ಥಿಕ ವಿಭಾಗ ನಿರ್ದೇಶಕ ರಾಕೇಶ್ ಕುಮಾರ್ ಜೈನ್ ಹೇಳಿದ್ದಾರೆ.
ಅವರು ಸುರತ್ಕಲ್ ನ ವಿಜಯ ಫ್ಯೂಲ್ ಪಾರ್ಕ್ ನಲ್ಲಿ 22ನೇ ಸಿಎನ್ ಜಿ ಸ್ಟೇಷನ್ ಗೆ ಚಾಲನೆ ನೀಡಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಕರಾವಳಿಯಲ್ಲಿ 17ಸಾವಿರ ಕೋಟಿ ರೂ. ಮೊತ್ತದ ಯೋಜನೆಯಲ್ಲಿ ಸದ್ಯ 3ಕೋಟಿ ರೂ. ವಿನಿಯೋಗಿಸಿಕೊಂಡು ಮನೆಮನೆಗೆ ಗ್ಯಾಸ್ ಸರಬರಾಜಿಗೆ ಕಾಮಗಾರಿ ನಡೆಯುತ್ತಿದ್ದು, ನದಿ ಮತ್ತು ಸೇತುವೆಯಲ್ಲಿ ಪೈಪ್ ಅಳವಡಿಕೆ ಕಾಮಗಾರಿಗಳ ವೇಳೆ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಹೀಗಾಗಿ ಯೋಜನೆ ಕಾರ್ಯ ರೂಪಕ್ಕೆ ಬರಲು ಅಲ್ಪ ನಿಧಾನವಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಗೇಲ್ ಇಂಡಿಯಾ ಗ್ಯಾಸ್ ಪ್ರತೀ ಮನೆಗಳಿಗೆ ತಲುಪಲಿದೆ ಎಂದು ನುಡಿದರು.
ಬಳಿಕ ಮಾತಾಡಿದ ಎಚ್ ಪಿಸಿಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್, ಮಂಗಳೂರಿನಲ್ಲಿ ಪ್ರಪ್ರಥಮ ಆನ್ ಲೈನ್ ಸಿಎನ್ ಜಿ ಸ್ಟೇಷನ್ ಸುರತ್ಕಲ್ ನಲ್ಲಿ ಪ್ರಾರಂಭಗೊಂಡಿರುವುದು ಸಂತಸದ ವಿಚಾರ. ಎಚ್ ಪಿಸಿ ಎಲ್ ಸಹಯೋಗದಲ್ಲಿ ಸಿಎನ್ ಜಿ ಸ್ಟೇಷನ್ ಶುಭಾರಂಭಗೊಂಡಿದ್ದು, ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭ ಗೇಲ್ ಗ್ಯಾಸ್ ಸಿಜಿಎಂ ಹೃದೇಶ್ ಕುಮಾರ್, ಸಿಎಫ್ ಓ ಪಂಕಜ್ ಕುಮಾರ್ ಗುಪ್ತ, ಸಂಸ್ಥೆಯ ಮಾಲಕ ದಯಾನಂದ ಶೆಟ್ಟಿ, ಕಾರ್ಪೊರೇಟರ್ ಶ್ವೇತಾ ಪೂಜಾರಿ, ಸಾಯಿ ಶಂಕರ್ ಬಿ., ರಿತೇಶ್ ಕುಮಾರ್, ಪ್ರಶಾಂತ್ ಮುಡಾಯಿಕೋಡಿ ಮತ್ತಿತರರು ಉಪಸ್ಥಿತರಿದ್ದರು.







