ಕ್ರಿಸ್ಮಸ್ ಜಗತ್ತಿನ ಜನರಲ್ಲಿ ಶಾಂತಿ, ಪ್ರೀತಿ, ನೆಮ್ಮದಿಯ ಭರವಸೆ ಮೂಡಿಸಲಿ: ಬಿಷಫ್ ಪೀಟರ್ ಪೌಲ್ ಸಲ್ದಾನ

ಮಂಗಳೂರು: ಕ್ರಿಸ್ಮಸ್ ಜಗತ್ತಿನ ಜನರಲ್ಲಿ ಶಾಂತಿ, ಪರಸ್ಪರ ಪ್ರೀತಿ ಮೂಡಿಸುವಂತಾಗಲಿ, ಹತಾಶೆಯಿಂದ ಕೂಡಿದ ಜನಸಮುದಾಯದ ನಡುವೆ ಭರವಸೆಯನ್ನು ಮೂಡಿಸುವಂತಾಗಲಿ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮ ಗುರು ಅತೀ.ವಂ.ಪೀಟರ್ ಪೌಲ್ ಸಲ್ದಾನ ಕ್ರಿಸ್ಮಸ್ ಸಂದೇಶ ನೀಡಿದರು.
ನಗರದ ಕೊಡಿಯಾಲಬೈಲ್ ಬಿಷಫ್ ಹೌಸ್ ನಲ್ಲಿಂದು ಅವರು ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಜಗತ್ತಿನಲ್ಲಿ ದ್ವೇಷ, ಧರ್ಮ ಹಾಗೂ ಜಾತಿ ಆಧಾರಿತ ತಾರತಮ್ಯ ಹಿಂಸೆ ತಾಂಡವ ವಾಡುತ್ತಿರುವ ಘಟನೆಗಳು. ಯುದ್ಧ, ಸಾವು, ನೋವು ದುರ್ಘಟನೆಗಳೇ ಪ್ರಮುಖ ಸುದ್ದಿ ಗಳಾಗಿವೆ.ಈ ನಡುವೆ ಪೋಪ್ ಫ್ರಾನ್ಸಿಸ್ ಅವರ ಮಾತುಗಳ ಪ್ರಕಾರ ಮೂರನೆ ಜಾಗತಿಕ ಯುದ್ಧ ಸದ್ದಿಲ್ಲದೆ ನಡೆಯುತ್ತಿದೆ. ಆತ್ಮಹತ್ಯೆಗಳು ಏರಿಕೆ ಯಾಗುತ್ತಿದೆ, ಹತಾಶೆ, ನಿರಾಸೆಯೆಡೆಗೆ ನಾವೆಲ್ಲ ಮುಖ ಮಾಡಿದಂತೆ ಕಾಣುತ್ತದೆ.
ಈ ಸಂದರ್ಭದಲ್ಲಿ ನಾವು ಯೇಸು ಕ್ರಿಸ್ತರ ಹುಟ್ಟು ಹಬ್ಬ ವನ್ನು ಆಚರಿಸುತ್ತಿದ್ದೇವೆ. ಈ ಹಬ್ಬ ದೇವರು ನಮ್ಮೊಂದಿಗೆ ಇದ್ದಾರೆ ಎನ್ನುವ ಅನುಭವವನ್ನು ನೀಡುತ್ತದೆ.
ಶೋಷಿತ ಸಮುದಾಯ ಜನರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸಿದ ಏಸು ಕ್ರಿಸ್ತರ ಜನ್ಮ ದಿನವಾದ ಕ್ರಿಸ್ಮಸ್ ಸಂದರ್ಭದಲ್ಲಿ ಜನರ ಮನದಲ್ಲಿ ಸಂತೋಷ ಹೆಚ್ಚು ವಂತೆ ಮಾಡಲಿ. ಈ ಹಬ್ಬ ಎಲ್ಲರೂ ಸಂತೋಷ ದಿಂದ ಆಚರಿಸುವ ಹಬ್ಬವಾಗಲಿ.
ಶಾಂತಿ ಮೊದಲು ನಮ್ಮ ಹೃದಯದಲ್ಲಿ ಮೂಡಿ ಬರಬೇಕು. ಅಲ್ಲಿಂದ ಇತರರ ಕಡೆ ಸಾಗಬೇಕು ನಮ್ಮ ನೆರೆಹೊರೆಯವರು ಸೇರಿದಂತೆ ಎಲ್ಲಾ ಕಡೆ ಪಸರಿಸಬೇಕು.
ಮನುಷ್ಯರ ನಡುವೆ ಜಾತಿ,ಮತ, ಧರ್ಮವನ್ನು ಮೀರಿ ಅಲ್ಪ ಸಂಖ್ಯಾತರು,ಬಹು ಸಂಖ್ಯಾತರು ಎಂದೆಣಿಸದೆ ಪರಸ್ಪರ ಗೌರವ ದೊಂದಿಗೆ, ಶಾಂತಿ, ಪ್ರೀತಿಯೊಂದಿಗೆ ಬದುಬೇಕಾಗಿದೆ.ಕ್ಷಿಪಣಿ, ಯುದ್ಧ ದ ಮೂಲಕ ಈ ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಅಸಾಧ್ಯ. ಈ ಜಗತ್ತನ್ನು ಸರ್ವ ಜನರ ಶಾಂತಿಯ ತೋಟವಾಗಿ ಪರಿವರ್ತಿ ಸಬೇಕಾಗಿದೆ. ಇತರರ ಬದುಕಿನಲ್ಲಿ ಹೊಸ ದೀಪ ಹಚ್ಚಬೇಕಾಗಿದೆ ಕ್ರಿಸ್ಮಸ್, ಹೊಸವರ್ಷ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಬಿಷಪ್ ಕರೆ ನೀಡಿದರು.
ಕೊರೋನಾ ಬಗ್ಗೆ ಎಚ್ಚರಿಕೆ ವಹಿಸಿ ಹಬ್ಬ ವನ್ನು ಆಚರಿಸೋಣ. ಆದರೆ ಈ ಬಗ್ಗೆ ಜನರಲ್ಲಿ ಅನಗತ್ಯವಾಗಿ ಭಯ ಹುಟ್ಟಿಸಬೇಕಾಗಿಲ್ಲ. ಕ್ರಿಸ್ಮಸ್ ಎಲ್ಲರಲ್ಲೂ ಸಂತೋಷ ವನ್ನುಂಟು ಮಾಡಲಿ ಎಂದು ಬಿಷಪ್ ಸಂದೇಶ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಶ್ರೇಷ್ಠ ಧರ್ಮಗುರು ಮೊ.ಮ್ಯಾಕ್ಸಿಂ ನೊರೊನ್ಹಾ, ಧರ್ಮಪ್ರಾಂತ್ಯದ ಪಿಆರ್ ಒ ಫಾ. ಜೆ.ಬಿ.ಸಲ್ಡಾನ, ರೋಯ್ ಕ್ಯಾಸ್ಟೋಲಿನೋ, ಪಾಲನಾ ಮಂಡಳಿಯ ಕಾರ್ಯದರ್ಶಿ ಡಾ.ಜಾನ್ ಡಿಸಿಲ್ವಾ, ಬಿಷಪ್ ಅವರ ಕಾರ್ಯದರ್ಶಿ ಫಾ.ತ್ರಿಶಾನ್ ಡಿಸೋಜ, ಕೆನರಾ ಕಮ್ಯೂನಿಕೇಶನ್ ನ ನಿರ್ದೇಶಕ ಫಾ.ಅನಿಲ್ ಫರ್ನಾಂಡೀಸ್, ಫೋರ್ ವಿಂಡ್ಸ್ ನ ಎಲಿಯಾಸ್ ಫರ್ನಾಂಡೀಸ್, ರಾಕ್ಣೋ ಸಂಪಾದಕ ಫಾ.ರೂಪೇಶ್ ಮಾಡ್ತಾ ಉಪಸ್ಥಿತರಿದ್ದರು.







