ದೋಣಿ ವಿನ್ಯಾಸ ಬದಲಾವಣೆಗೆ ಕೆಂದ್ರ ಸಚಿವರಿಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಪದಾಧಿಕಾರಿಗಳು ಗುರುವಾರ ನವದೆಹಲಿಯಲ್ಲಿ ಕೇಂದ್ರ ಮೀನುಗಾರಿಕಾ ಸಚಿವ ಪಾರ್ಶೋತ್ತಮ್ ರೂಪಾಲರನ್ನು ಭೇಟಿ ಮಾಡಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ (PMMSY) ಆಳ ಸಮುದ್ರದ ಮೀನುಗಾರಿಕೆ ಗಿಲ್ ನೆಟ್ ದೋಣಿಗಳ ವಿನ್ಯಾಸದಲ್ಲಿ ಕೆವವು ಮಾರ್ಪಾಡು ಮಾಡುವಂತೆ ಮನವಿ ಸಲ್ಲಿಸಿದರು.
ದೋಣಿಯ ಉದ್ದವನ್ನು 22.70 ಮೀ ನಿಂದ 24.00 ಮೀ ಗೆ ಹೆಚ್ಚಿಸುವುದು ಮತ್ತು ದೋಣಿಯ ಅಗಲ 6.40 ಮೀ ನಿಂದ 7.20 ಮೀ. ಹೆಚ್ಚಳ. ಎಂಜಿನ್ ಅಶ್ವಶಕ್ತಿಯನ್ನು 200 Hp ನಿಂದ 350 HP ಗೆ ಹೆಚ್ಚಿಸುವುದು. ದೋಣಿಯ ಹಿಂಭಾಗದಲ್ಲಿರುವ ಕ್ಯಾಬಿನ್ ಅನ್ನು ದೋಣಿಯ ಮಧ್ಯಕ್ಕೆ ಬದಲಾಯಿಸುವುದು. ಆಳ ಸಮುದ್ರದ ಮೀನುಗಾರಿಕೆ ಗಿಲ್ನೆಟ್/ಲಾಂಗ್ ಲೈನರ್ ಬೋಟ್ ಜೊತೆಗೆ ಪರ್ಸಿನ್ ಬೋಟ್ ನಿರ್ಮಾಣಕ್ಕೆ ಅನುಮತಿ ನೀಡುವುದು ಸೇರಿದಂತೆ ಮೀನುಗಾರರ ಸಮಸ್ಯೆಗಳನ್ನು ಮಾನ್ಯ ಸಚಿವರ ಗಮನಕ್ಕೆ ತರಲಾಯಿತು. ನಿಯೋಗದ ಮನವಿಗೆ ಸ್ಪಂದಿಸಿದ ಮಾನ್ಯ ಮೀನುಗಾರಿಕಾ ಸಚಿವರು ಈ ಕುರಿತು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.
ನಿಯೋಗದಲ್ಲಿ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಸುನಿಲ್, ನವೀನ್ ದಾಸ್, ವಿವೇಕಾನಂದ, ಲೋಕನಾಥ್ ಹಾಗೂ ವಿಲಿಯಂ ಪ್ರಾನ್ಸಿಸ್ ರವರು ಹಾಜರಿದ್ದರು.





