ಜೆಬಿಎಫ್ ಉದ್ಯೋಗಿಗಳಿಗೆ ಜಿಎಂಪಿಎಲ್ ನಲ್ಲಿ ಉದ್ಯೋಗಕ್ಕೆ ಮನವಿ

ಮಂಗಳೂರು: ಜಿಎಂಪಿಎಲ್ (GAIL India) ಕಂಪೆನಿಯಲ್ಲಿ ಹಿಂದಿನ ಜೆಬಿಎಫ್ ನಲ್ಲಿದ್ದ ಎಲ್ಲಾ ಉದ್ಯೋಗಿಗಳಿಗೂ ಉದ್ಯೋಗ ನೀಡುವಂತೆ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.
ಗೈಲ್ ಮಂಗಳೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ -ಜಿಎಂಪಿಎಲ್ (ಹಿಂದಿನ ಜೆಬಿಎಫ್ ಪಿಎಲ್) ಕಂಪೆನಿಯಲ್ಲಿ ಎಂ.ಎಸ್.ಇ.ಝೆಡ್. ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟು ಸ್ಥಳಾಂತರ ಹೊಂದಿದ್ದ ಕುಟುಂಬ ಸದಸ್ಯರ ನೆಲೆಯಲ್ಲಿ (ಪಿ,ಡಿ.ಎಫ್.) ಉದ್ಯೋಗ ಪಡೆದಿದ್ದ 115 ಮಂದಿ ಹಾಗೂ ನೇರ ನೇಮಕಾತಿಯಲ್ಲಿ ನೇಮಕಗೊಂಡ ಸ್ಥಳಿಯರಿಗೆ ಉದ್ಯೋಗ ನೀಡುವಂತೆ ದಕ್ಷಿಣ ಸಂಸದ ನಳಿನ್ ಕುಮಾರ್ ಕಟೀಲ್ ರವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ ದೀಪ್ ಸಿಂಗ್ ಪೂರಿ ಯವರನ್ನು ಇಂದು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಎಂ.ಎಸ್.ಇ.ಝೆಡ್. ಸ್ಥಾಪನೆಗೆ ಸ್ಥಳ ನೀಡಿದ್ದ ನೆಲೆಯಲ್ಲಿ ಕೆಲಸ ನೀಡಲಾಗಿದ್ದ ಎಲ್ಲಾ ಉದ್ಯೋಗಿಗಳಿಗೆ ಜಿಎಂಪಿಎಲ್ ನಲ್ಲಿ ಯಾವುದೇ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸದೆ ಉದ್ಯೋಗವನ್ನು ನೀಡುವುದು ಹಾಗೂ ಜೆಬಿಎಫ್ ಪಿಎಲ್ ನಲ್ಲಿ ನೇರ ನೇಮಕಾತಿ ಮೂಲಕ (ನಾನ್ ಪಿ.ಡಿ.ಎಫ್) ಉದ್ಯೋಗಿಗಳಾಗಿದ್ದ ಎಲ್ಲಾ ಸ್ಥಳೀಯರಿಗೂ ಖಾಯಂ ಉದ್ಯೋಗವನ್ನು ನೀಡುವಂತೆ ಜಿಎಂಪಿಎಲ್ ಆಡಳಿತ ಮಂಡಳಿಗೆ ಸೂಚಿಸುವಂತೆ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.







