ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಸಂಸತ್ತಿನಲ್ಲಿ ನಡೆದ ದಾಂಧಲೆಗೆ ಭದ್ರತಾ ವೈಫಲ್ಯ ಕಾರಣವಾಗಿದ್ದು ಅದಕ್ಕೆ ಗೃಹ ಸಚಿವರು ಸ್ಪಷ್ಟೀಕರಣ ನೀಡಬೇಕೆಂದು ಕೇಳಿದರೆ ಸಂಸದರನ್ನು ಅಮಾನತು ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಸಂಸತ್ತಿನಿಂದ 146 ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಶುಕ್ರವಾರ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಮಿನಿ ಸೌಧದ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರಶ್ನಿಸುವ ಅವಕಾಶವನ್ನು ಕಸಿಯಲಾಗುತ್ತಿದೆ. ಕೇಂದ್ರ ಸರಕಾರದ ಸರ್ವಾಧಿಕಾರ ಧೋರಣೆಯಿಂದಾಗಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ. ತನಿಖಾ ಸಂಸ್ಥೆಗಳನ್ನು ಬಳಸಿ ವಿಪಕ್ಷಗಳ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ. ವಿಪಕ್ಷಗಳ ಆಡಳಿತ ಇರುವಲ್ಲಿ ರಾಜ್ಯಪಾಲರನ್ನು ಬಳಸಿಕೊಂಡು ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ದೇಶದ ಪ್ರಜಾಪ್ರಭುತ್ವ, ಜಾತ್ಯಾತೀತ, ಸಮಾಜವಾದದ ವ್ಯವಸ್ಥೆ, ಸಂಸ್ಕೃತಿಯನ್ನು ನಾಶ ಪಡಿಸಲಾಗುತ್ತಿದೆ ಎಂದರು.
ಮೂಲಭೂತ ಹಕ್ಕುಗಳು ದಿನೇ ದಿನೇ ಕ್ಷೀಣಿಸುತ್ತಿದೆ. ಮಾಧ್ಯಮಗಳು ಕೂಡ ಪ್ರಶ್ನೆ ಮಾಡಲಾಗದಂತಹ ಸ್ಥಿತಿ ಇದೆ. ಮೂರನೆ ಬಾರಿ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಯಾದರೆ ಸಂವಿಧಾನ ಕೂಡ ಉಳಿಯುವುದಿಲ್ಲ. ಯಾವ ಸಂಸ್ಥೆಯು ಇರುವುದಿಲ್ಲ. ಮೋದಿಯವರನ್ನು ಪೂಜೆ ಮಾಡಿ ಕುಳಿತುಕೊಳ್ಳುವ ಸ್ಥಿತಿ ಬರಲಿದೆ. ಇಂತಹ ಸರ್ವಾಧಿಕಾರ ಧೋರಣೆ ವಿರುದ್ದ ಹೋರಾಟ ಮುಂದುವರಿಯಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಸಂಸತ್ ಒಳಗೆ ಪ್ರವೇಶಿಸಿ ಭಯದ ವಾತಾವರಣ ನಿರ್ಮಿಸಿರುವುದು ಗಂಭೀರ ವಿಚಾರ. ಇದರ ಬಗ್ಗೆ ಚರ್ಚಿಸಲು ಅವಕಾಶ ಕೇಳಿದರೆ ಅಮಾನತು ಮಾಡಿರುವುದು ಕಹಿ ಘಟನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಕರಾಳ ದಿನ. ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎಂದು ಆರೋಪಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಅಶ್ವಿನ್ ಕುಮಾರ್ ರೈ, ಮಿಥುನ್ ರೈ, ಬಿ.ಎ. ಬಾವ, ಆರ್. ಪದ್ಮರಾಜ್, ಮಮತಾ ಗಟ್ಟಿ, ಇನಾಯತ್ ಅಲಿ, ಲುಕ್ಮಾನ್ ಬಂಟ್ವಾಳ, ವಿಶ್ವಾಸ್ ಕುಮಾರ್ ದಾಸ್, ಶಾಲೆಟ್ ಪಿಂಟೋ, ಶೇಖರ್ ಕುಕ್ಕೇಡಿ, ಜೋಕಿಂ ಡಿಸೋಜಾ, ಪದ್ಮಶೇಖರ ಜೈನ್, ಪಿ.ಪಿ. ವರ್ಗೀಸ್, ವೆಂಕಪ್ಪ ಗೌಡ, ಪ್ರವೀಣ್‌ಚಂದ್ರ ಆಳ್ವ, ಎಂ.ಎಸ್. ಮುಹಮ್ಮದ್, ಜೆ. ಅಬ್ದುಲ್ ಸಲೀಂ, ಬೇಬಿ ಕುಂದರ್, ಪೂರ್ಣೇಶ್ ಭಂಡಾರಿ, ಲಾವಣ್ಯ ಬಳ್ಳಾಲ್, ಅಪ್ಪಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶಶಿಧರ್ ಹೆಗ್ಡೆ ಸ್ವಾಗತಿಸಿ, ಶಾಹುಲ್ ಹಮೀದ್ ವಂದಿಸಿದರು.







