ಯೆನೆಪೋಯ ವಿವಿಯಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರ

ಮಂಗಳೂರು, ಡಿ.24: ರಾಜ್ಯ ಎನ್ನೆಸ್ಸೆಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೆನೆಪೋಯ ವಿವಿ ಎನ್ನೆಸ್ಸೆಸ್ ಘಟಕದ ಸಂಯೋಜನೆಯಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ಇತ್ತೀಚೆಗೆ ನಡೆಯಿತು.
ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದ ಏಕತೆ ಮತ್ತು ಯುವ ಸಬಲೀಕರಣಕ್ಕೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಕೊಡುವ ಅಪಾರವಾಗಿದೆ. ಯುವಪೀಳಿಗೆಯ ಪ್ರತಿಭಾ ವಿಕಾಸ ಮತ್ತು ದೇಶ ಸೇವೆಯ ನಿಸ್ವಾರ್ಥ ಬದುಕು ರೂಪಿಸುವ ಎನ್ನೆಸ್ಸೆಸ್ ಸಂಘಟನೆಯ ಆದರ್ಶ ಸದಾ ಶ್ಲಾಘನೀಯ ಎಂದರು.
ಯೆನೆಪೋಯ ವಿವಿ ಉಪಕುಲಪತಿ ಡಾ.ಎಂ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಎನ್ನೆಸ್ಸೆಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ, ಪ್ರಾದೇಶಿಕ ನಿರ್ದೇಶಕ ಕಾರ್ತಿಗೆನ್, ಲೆಫ್ಟಿನೆಂಟ್ ಕರ್ನಲ್ ಗ್ರೇಶಿಯಸ್ ಸಿಕ್ವೇರಾ ಅತಿಥಿಗಳಾಗಿದ್ದರು.
ಯೆನೆಪೋಯ ವಿವಿ ಕುಲಸಚಿವ ಡಾ.ಗಂಗಾಧರ ಸೋಮಯಾಜಿ ರಾಷ್ಟ್ರೀಯ ಏಕೀಕರಣ ಶಿಬಿರದ ಮೆರವಣಿಗೆಗೆ ಚಾಲನೆ ನೀಡಿದರು. ಯೆನೆಪೋಯ ವಿವಿಯ ಎನ್ನೆಸ್ಸೆಸ್ ಘಟಕದ ಸಂಯೋಜಕ ಡಾ. ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಅವರಿಲ್ ರೆಬೊಲ್ಲೊ ವಂದಿಸಿದರು. ನವ್ಯಾ ಮತ್ತು ಶಿಫಾಲಿ ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು.







