ಪದ್ಮಶ್ರೀ ಪುರಸ್ಕೃತೆ ಫೂಲ್ ಬಸನ್ ಬಾಯಿ ಯಾದವ್‌ಗೆ ಮೂಲತ್ವ ಪ್ರಶಸ್ತಿ ಪ್ರದಾನ

ಮಂಗಳೂರು : ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಕೊಡಮಾಡುವ 9ನೆ ವರ್ಷದ ‘ಮೂಲತ್ವ ವಿಶ್ವಪ್ರಶಸ್ತಿ’ ಯನ್ನು ಸಮಾಜ ಸೇವಕಿ, ಛತ್ತೀಸ್‌ಘಡ್‌ನ ಪದ್ಮಶ್ರೀ ಪುರಸ್ಕೃತೆ ಫೂಲ್ ಬಸನ್ ಬಾಯಿ ಯಾದವ್‌ಗೆ ರವಿವಾರ ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಫೂಲ್ ಬಸನ್ ಬಾಯಿ ಯಾದವ್ ಬಡತನದ ಬೇಗೆಯಿಂದ ಬೆಳೆದು ಬಂದ ನನಗೆ ಹಸಿವಿನ ಅರಿವು ಇದೆ. ನನ್ನಂತಹ ಅದೆಷ್ಟೋ ಮಂದಿ ಸಂಕಷ್ಟದಲ್ಲಿರುವುದನ್ನು ಗಮನಿಸಿ ಏನಾದರೊಂದು ಬದಲಾವಣೆ ಮಾಡಬೇಕು ಎಂಬ ಸಂಕಲ್ಪ ಮಾಡಿಕೊಂಡೆ. ಹಾಗೇ ಅದನ್ನು ಕಾರ್ಯರೂಪಕ್ಕಿಳಿಸಿದೆ. ಸತತ ಕಠಿಣ ಪರಿಶ್ರಮವು ಸಮಾಜದಲ್ಲಿ ಬದಲಾವಣೆಗೆ ನಾಂದಿ ಹಾಡಿತು. ‘ಮಾ ಬಾಮಲೇಶ್ವರಿ ಜನಹಿತ್ ಕರೇ ಸಮಿತಿ’ಯನ್ನು ರಚಿಸಿ ಸಾವಿರಾರು ಮಹಿಳೆಯರನ್ನು ಒಗ್ಗೂಡಿಸಿ ಮಹಿಳೆಯರ ಧ್ವನಿಯಾಗಿ ಕೆಲಸ ಮಾಡಲಾರಂಭಿಸಿದೆ. ಸಮಾಜ ನನ್ನ ಕೆಲಸವನ್ನು ಗುರುತಿಸಿರುವುದಕ್ಕೆ ಸಂತೋಷವಿದೆ. ಆದರೆ ನಾನು ಹಣಕ್ಕಾಗಿ ಏನನ್ನೂ ಮಾಡಿಲ್ಲ. ಹಸಿವು, ನೋವು ದೂರವಾಗಬೇಕು ಎಂಬ ಕನಸೊಂದೇ ನನ್ನಲ್ಲಿ ಇದ್ದುದು. ಅದೀಗ ನನಸಾಗಿದೆ. ನೊಂದವರ ಕಣ್ಣೀರೊರೆಸುವುದು ಕೂಡ ಪುಣ್ಯ ಕಾರ್ಯವಾಗಿದೆ. ಹಾಗಾಗಿ ಹಸಿವು ಮತ್ತು ಬಡತನದಿಂದ ಬಳಲಿದವರ ಪರ ಸಮಾಜ ಸದಾ ನಿಲ್ಲಬೇಕು ಎಂದರು.
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಪ್ರಕಾಶ್ ಮೂಲತ್ವ ಮಾತನಾಡಿ ‘ಮೂಲತ್ವ ವಿಶ್ವ ಪ್ರಶಸ್ತಿ’ಗೆ ಫೂಲ್ ಬಸನ್ ಬಾಯಿ ಯಾದವ್ ಅರ್ಹ ವ್ಯಕ್ತಿ. ಅವರ ಕಾರ್ಯವನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರು ದೇಶ ಗುರುತಿಸಿದ ಪ್ರಸಿದ್ಧ ಸಮಾಜ ಸೇವಕಿ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಈಶ್ವರ್ ಮಲ್ಪೆ, ಗೋವಿಂದದಾಸ ಕಾಲೇಜಿನ ಎನ್ನೆಸ್ಸೆಸ್ ಘಟಕದ ಕಾರ್ಯದರ್ಶಿ ಹಿತಾ ಉಮೇಶ್, ಗೋಕರ್ಣನಾಥೇಶ್ವರ ಕಾಲೇಜಿನ ಪ್ರೀತಿಕಾ ಎ., ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್ ಶೈನಿ, ಲಕ್ಷ್ಮೀಶ ಪಿ. ಕೋಟ್ಯಾನ್, ಮೂಲತ್ವ ವಿಶ್ವ ಪ್ರಶಸ್ತಿಯ ಸಂಚಾಲಕಿ ಅಕ್ಷತಾ ಕದ್ರಿ, ಸದಸ್ಯ ಪ್ರವೀಣ್ ಉಡುಪ ಮತ್ತಿತರರು ಉಪಸ್ಥಿತರಿದ್ದರು.







