ಇಸ್ರೋ ವಿಜ್ಞಾನಿ ಶಂಭಯ್ಯ ಕೊಡಪಾಲ, ಡಾ.ರಘುರಾಮ ಮಾಣಿಬೆಟ್ಟುರಿಗೆ ಕೆ.ವಿ.ಜಿ.ಸಾಧನಾಶ್ರೀ ಪ್ರಶಸ್ತಿ ಪ್ರದಾನ

ಸುಳ್ಯ : ಈ ಸಮಾಜಕ್ಕೆ ಮತ್ತು ದೇಶಕ್ಕೆ ವಿದ್ಯಾವಂತ ಯುವ ಜನಾಂಗದ ಜೊತೆಗೆ ಸಂಸ್ಕಾರಯುತ ಮಕ್ಕಳ ಕೊಡುಗೆ ನೀಡಬೇಕಾಗಿದೆ. ಡಾ. ಕುರುಂಜಿ ವೆಂಕಟ್ರಮಣರ ಸಾಧನೆ ಮತ್ತು ಅವರ ಬದುಕು ಉಳಿದವರಿಗೆ ಪ್ರೇರಣೆ ಮತ್ತು ಅನುಕರಣೀಯ. ಆ ಪ್ರೇರಣೆಯಲ್ಲಿ ಸದೃಢ ಸಮಾಜ ಕಟ್ಟಬೇಕು ಎಂದು ಮಂಗಳೂರು ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪುರಾಣಿಕ್ ಹೇಳಿದ್ದಾರೆ.
ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 95ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ನಡೆದ ಕೆ.ವಿ.ಜಿ ಸುಳ್ಯ ಹಬ್ಬ ಆಚರಣೆ ಕಾರ್ಯಕ್ರದಲ್ಲಿ ಮಂಗಳವಾರ ನಡೆದ ಕೆ.ವಿ.ಜಿ ಸಂಸ್ಮರಣೆ ಹಾಗೂ ಕೆ.ವಿ.ಜಿ.ಸಾಧನಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆವಿಜಿ ಸಂಸ್ಮರಣಾ ಭಾಷಣ ಮಾಡಿ ಅವರು ಮಾತನಾಡಿದರು.
ವಿದ್ಯಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ ಮಹಾನ್ ಸಾಧಕ ಡಾ.ಕುರುಂಜಿ ವೆಂಕಟ್ರಮಣ ಗೌಡರು. ಉತ್ತಮ ಕೃಷಿಕನಾ ಗಿದ್ದ ಡಾ.ಕುರುಂಜಿಯವರು ಯಾವ ಮೂಲಭೂತ ಸೌಕರ್ಯಗಳೂ ಇಲ್ಲದ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸುಳ್ಯವನ್ನು ಬೆಳೆಸಿದ ಸಾಧನೆ ಸಾಮಾನ್ಯ ಸಾಧನೆಯಲ್ಲ. ಅವರು ಒಬ್ಬ ನಿಜವಾದ ಸಾಧಕ ಎಂದು ಬಣ್ಣಿಸಿದರು. ಆಧುನಿಕತೆಯ ಜೊತೆಗೆ ಬದುಕಿ ಆದರೆ ಸಂಸ್ಕಾರವನ್ನು ಮರೆಯದೆ ಬದುಕಿ ಎಂದು ಅವರು ಕರೆ ನೀಡಿದರು.
ಸಾಧನಾಶ್ರೀ ಪ್ರಶಸ್ತಿ ಸ್ವೀಕರಿಸಿ ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಶಂಭಯ್ಯ ಕೊಡಪಾಲ ಮಾತನಾಡಿ’ ಚಂದ್ರಯಾನ 3ರ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ನಾಲ್ಕನೇ ರಾಷ್ಟ್ರ ಭಾರತ ಎಂಬ ಹೆಗ್ಗಳಿಕೆ ನಮ್ಮದು. ಹಲವಾರು ಒತ್ತಡದ, ನಿರೀಕ್ಷೆಗಳ ಮಧ್ಯೆ ಎಲ್ಲರ ಕೊಡುಗೆಯಿಂದ ಈ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ. ಇದರಿಂದ ಜಗತ್ತಿನಲ್ಲಿ ಭಾರತದ ಹಿರಿಮೆ ಇನ್ನಷ್ಟು ಎತ್ತರಕ್ಕೆ ಏರಿದೆ ಎಂದು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ, ಸಾಧನಾ ಶ್ರೀ ಪ್ರಶಸ್ತಿ ಸ್ವೀಕರಿಸಿದ ಡಾ. ರಘುರಾಮ ಮಾಣಿಬೆಟ್ಟು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಡಾ. ರಘುರಾಮ ಮಾಣಿಬೆಟ್ಟು ಮತ್ತು ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಶಂಭಯ್ಯ ಕೊಡಪಾಲ ಅವರಿಗೆ ಕೆವಿಜಿ ಸಾಧನಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು, ಕಾರ್ಯದರ್ಶಿ ದಿನೇಶ್ ಅಂಬೆಕಲ್ಲು, ಕೋಶಾಧಿಕಾರಿ ಜನಾರ್ಧನ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಜಯನಗರದ ಚೆಂಡೆಮೂಲೆ ಸರೋಜ ಅವರ ಮನೆ ನಿರ್ಮಾಣಕ್ಕೆ ನೆರವು ನೀಡಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ಟಿ.ವಿಶ್ವನಾಥ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ಮಧುರ ಎಂ.ಆರ್. ಡಾ.ರಘುರಾಮ ಮಾಣಿಬೆಟ್ಟು ಅವರ ಸನ್ಮಾನ ಪತ್ರ ವಾಚಿಸಿದರು. ವೀರಪ್ಪ ಗೌಡ ಕಣ್ಕಲ್ ಶಂಭಯ್ಯ ಕೊಡಪಾಲ ಅವರ ಸನ್ಮಾನ ಪತ್ರ ವಾಚಿಸಿದರು. ಸಾಮಾಜಿಕ ಸೇವಾ ಕಾರ್ಯಗಳ ಬಗ್ಗೆ ಡಾ.ಎನ್.ಎ.ಜ್ಞಾನೇಶ್ ಮಾಹಿತಿ ನೀಡಿದರು. ಸಂಘದ ನೂತನ ಸದಸ್ಯರ ಕುರಿತು ಆನಂದ ಖಂಡಿಗ ವಿವರ ನೀಡಿದರು.ಸಂಘದ ಕಾರ್ಯದರ್ಶಿ ದಿನೇಶ್ ಅಂಬೆಕಲ್ ವಂದಿಸಿದರು. ಚಂದ್ರಮತಿ ಕೆ ಕಾರ್ಯಕ್ರಮ ನಿರೂಪಿಸಿದರು.
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಆರಂಭಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಉಡುಪಿಯ ಕಲಾಮಯಂ ಇವರಿಂದ ಜನಪದ ಕಲೆಗಳ ಅನಾವರಣ, ಜಾನಪದ ನೃತ್ಯ ಸಂಗೀತ ಮತ್ತು ವಾದ್ಯ ಪರಿಕರಗಳ ಸಮ್ಮಿಲನ ಜಾನಪದ ವೈಭವ ನಡೆಯಿತು.







