ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹಳೆಯಂಗಡಿ ವಲಯ ಮುಸ್ಲಿಮ್ ಜಮಾಅತ್ ಒಕ್ಕೂಟದಿಂದ ದೂರು ದಾಖಲು

ಮುಲ್ಕಿ: ಮುಸ್ಲಿಮ್ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾನಾಡಿದ ಪ್ರಭಾಕರ್ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮುಸ್ಲಿಮ್ ಜಮಾತ್ ಒಕ್ಕೂಟ ಹಳೆಯಂಗಡಿ ವಲಯದ ವತಿಯಿಂದ ಶನಿವಾರ ಮುಲ್ಕಿ ಪೊಲೀಸರಿಗೆ ದೂರು ನೀಡಿ ಆಗ್ರಹಿಸಲಾಯಿತು.
ಮಹಿಳೆಯರ ಗೌರವಕ್ಕೆ ಚ್ಯುತಿ ತಂದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ ನನ್ನು ತಕ್ಷಣವೇ ಬಂಧಿಸುವ ಮೂಲಕ ಹಲವಾರು ವರ್ಷಗಳಿಂದ ಮುಸ್ಲಿಮ್ ಸಮುದಾಯದ ಬಗ್ಗೆ ಅವಹೇಳನ ಮಾಡುತ್ತಾ ರಾಜ್ಯದಲ್ಲಿ ಸದಾ ಶಾಂತಿ ಕರಡುವ ಹೇಳಿಕೆ ನೀಡುತ್ತಿರುವ ಈತನಿಗೆ ಕಡಿವಾಣ ಹಾಕಬೇಕಾಗಿದೆ. ಭಟ್ ಹೇಳಿಕೆ ಇಡೀ ಮಹಿಳಾ ಸಮುದಾಯ ತಲೆತಗ್ಗಿಸುವಂತೆ ಮಾಡಿದೆ. ಭಟ್ ಹೇಳಿಕೆ ವಿರುದ್ಧ ಸರಕಾರ ಆದಷ್ಟು ಶೀಘ್ರ ಗಂಭೀರವಾಗಿ ಪರಿಗಣಿಸಬೇಕು. ಈತನಿಗೆ ನೀಡಿರುವ ಮಧ್ಯಾಂತರ ಜಾಮೀನನನ್ನು ರದ್ದು ಪಡಿಸಿ ಶಿಕ್ಷೆಗೆ ಗುರಿ ಪಡಿಸಬೇಕು. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಜಾಮೀನು ರಹಿತ ಎಫ್.ಐ.ಆರ್ ದಾಖಲಿಸಿ ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮಕಗೊಳ್ಳಬೇಕೆಂದು ಮುಸ್ಲಿಮ್ ಜಮಾಅತ್ ಒಕ್ಕೂಟ ಹಳೆಯಂಗಡಿ ವಲಯ ಮುಲ್ಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದೆ.
ಈ ಸಂದರ್ಭ ಹಳೆಯಂಗಡಿ ವಲಯ ಮುಸ್ಲಿಮ್ ಜಮಾಅತ್ ಒಕ್ಕೂಟದ ಅಧ್ಯಕ್ಷ ಶಾಹುಲ್ ಹಮೀದ್ ಕದಿಕೆ, ಉಪಾಧ್ಯಕ್ಷ ಹಾರೀಸ್ ನವರಂಗ್, ಪ್ರಧಾನ ಕಾರ್ಯದರ್ಶಿ ಮೊಯ್ದೀನ್ ಇಂದಿರನಗರ, ಸಹ ಕಾರ್ಯದರ್ಶಿ ಅಬ್ದುಲ್ ಅಝೀಝ್ ಐ.ಎ.ಕೆ., ಕೋಶಾಧಿಕಾರಿ ಮಿರ್ಝಾ ಅಹ್ಮದ್ ಸಂತೆಕಟ್ಟೆ, ಗೌರವ ಸಲಹೆಗಾರರಾದ ಅಬ್ದುಲ್ ಖಾದರ್ ಕಜಕತೋಟ, ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಅಬ್ದುಲ್ ರಹಿಮಾನ್ ಕುಡುಂಬೂರು, ಪದಾಧಿಕಾರಿಗಳಾದ ಎಂ.ಎ. ಅಬ್ದುಲ್ ಕಾದರ್ ಇಂದಿರಾನಗರ, ರಿಯಾಝ್ ಕಲ್ಲಾಪು, ವಾಸೀಮ್ ಜಾಮಿಯಾ ಮೊಹಲ್ಲಾ ಮೊದಲಾದವರು ಇದ್ದರು.







