ಮಾರ್ನಬೈಲ್: ಮೆಲ್ಕಾರ್ ಮಹಿಳಾ ಕಾಲೇಜು ವಾರ್ಷಿಕೋತ್ಸವ

ಬಂಟ್ವಾಳ: ಪಾಣೆಮಂಗಳೂರು ಸಮೀಪದ ಮಾರ್ನಬೈಲ್ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜು ಇದರ ವಾರ್ಷಿಕೋತ್ಸವವು ಶನಿವಾರ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಯು. ಟಿ. ಇಪ್ತಿಕಾರ್ ಮಾತನಾಡಿ, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವು ಪ್ರಮುಖವಾಗಿದ್ದು, ಇದು ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ, ಜ್ಞಾನ ಗೌರವವನ್ನು ಹೆಚ್ಚಿಸುತ್ತದೆ. ಸಮಾನತೆ, ಆತ್ಮ ಗೌರವ, ಸ್ವಾವಲಂಬನೆ, ಸಹಬಾಳ್ವೆ, ವೈಚಾರಿಕ ಚಿಂತನೆ, ದೇಶ ಪ್ರೇಮವನ್ನು ಶಿಕ್ಷಣ ಕಲಿಸಿಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಂಗಳೂರು ಲೋಕಾಯುಕ್ತ ವಿಭಾಗದ ಇನ್ಸ್ಪೆಕ್ಟರ್ ಅಮಾನುಲ್ಲಾ ಮಾತನಾಡಿ ಸಮಾಜದಲ್ಲಿ ಪುರುಷನಿಗೆ ಸರಿ ಸಮಾನವಾಗಿ ನಿಲ್ಲುವಂತೆ ಶಿಕ್ಷಣವು ಪ್ರೇರೇಪಿಸುತ್ತದೆ. ಮಹಿಳಾ ಶೋಷಣೆ, ದೌರ್ಜನ್ಯ, ಅಸಮಾನತೆ, ಕೀಳರಿಮೆ ಕಡಿಮೆಯಾಗಬೇಕಾದರೆ, ಮಹಿಳಾ ಶಿಕ್ಷಣ ಅಗತ್ಯವೆಂದು ಪ್ರತಿಪಾದಿಸಿದರು. ರಶೀದ್ ಹಾಜಿಯವರ ಶೈಕ್ಷಣಿಕ ಸೇವೆ ಉಳಿದವರಿಗೂ ಮಾದರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಸ್ಥಾಪಕ ಡಾ. ಎಸ್. ಎಂ. ರಶೀದ್ ಹಾಜಿ ಮಾತನಾಡಿ ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯಬೇಕು. ಅದರಲ್ಲೂ ಮುಸ್ಲಿಂ ಮಹಿಳೆಯರು ಪದವೀಧರೆಯರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು, ಮಹಿಳೆಯರು ಶಿಕ್ಷಣ ಪಡೆದಾಗ ಸಮಾಜ ಹಾಗೂ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ಸಾಹುಲ್ ಹಮೀದ್, ಇಬ್ರಾಹಿಂ ಗಡಿಯಾರ್, ಸಿ.ಕೆ.ಎಂ.ರಫಾಯಿ, ರಿಫಾತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಬಿ. ಕೆ. ಅಬ್ದುಲ್ ಲತೀಫ್ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ, ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಝುಬೆದಾ ಸಲ್ಹ ಸ್ವಾಗತಿಸಿ, ಆಯಿಷ ತೌಫಿರ ವಂದಿಸಿದರು, ನಜ್ಮಿಯ ಜಾಸ್ಮಿನ್ ಕಾರ್ಯಕ್ರಮ ನಿರೂಪಿಸಿದರು.







