ಶಾಂತಿ-ಏಕತೆಯ ಬಂಧುತ್ವವು ಸರಕಾರಿ ಕಾರ್ಯಕ್ರಮವಾಗಲಿ: ಸ್ಪೀಕರ್ ಯು.ಟಿ. ಖಾದರ್
ಮಂಗಳೂರು ಬಿಷಪರ ಬಂಧುತ್ವ ಕ್ರಿಸ್ಮಸ್ ಕೂಟ

ಮಂಗಳೂರು: ಬಿಷಪರ ಕ್ರಿಸ್ಮಸ್ ಬಂಧುತ್ವ ಕೂಟದ ಕಾರ್ಯಕ್ರಮವು ನಾಡಿನ ಶಾಂತಿ-ಏಕತೆಗೆ ಪ್ರೋತ್ಸಾಹದಾಯಕ ವಾಗಿದೆ. ನಮ್ಮೊಳಗೆ ಬಲವಾದ ಬಾಂಧವ್ಯವನ್ನು ಬೆಸೆಯುವವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಮತ್ತು ಸಮುದಾಯದ ಶಕ್ತಿಯ ಆಧಾರಸ್ತಂಭವಾಗಿದೆ. ಬಿಷಪ್ ಅವರ ಕ್ರಿಸ್ಮಸ್ ಕಾರ್ಯಕ್ರಮಗಳಲ್ಲಿ ತಂದೆಯೊಂದಿಗೆ ಭಾಗವಹಿಸಿದ ಬಾಲ್ಯದ ನೆನಪುಗಳು ಆಸ್ಮರಣೀಯ. ಇಂತಹ ಬಂಧುತ್ವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಯ ಮಾರ್ಗದರ್ಶನದಲ್ಲಿ ಜಿಲ್ಲ್ಲಾಯಾದ್ಯಂತ ಆಚರಿಸಬೇಕು. ಬಂಧುತ್ವವು ಸರಕಾರಿ ಕಾರ್ಯಕ್ರಮವಾಗಿ ಹೊರಹೊಮ್ಮಬೇಕು ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್‌ಯು.ಟಿ.ಖಾದರ್ ಹೇಳಿದರು.
ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ಶನಿವಾರ ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಬಿಷಪ್ ಹೌಸ್‌ನಲ್ಲಿ ಆಯೋಜಿಸಿದ ಬಂಧುತ್ವ ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹ ಮಾತನಾಡಿ ಸಂಘಷರ್ದಿಂದ ನಲುಗಿರುವ ಜಗತ್ತಿನಲ್ಲಿ, ಯೇಸುವಿನ ಜನನವು ಶಾಂತಿಗೆ ನಾಂದಿ ಹಾಡಿತು. ಅವರ ಜೀವನ, ಬೋಧನೆಗಳು ಮತ್ತು ಅವರು ಬಿಟ್ಟುಹೋದ ಕ್ಷಮೆಯ ಪರಂಪರೆ ಶಾಂತಿಯ ಸಾರವಾಗಿದೆ. ಯೇಸುವಿನಿಂದ ಪ್ರೇರಿತಗೋಂಡ ಮಹಾತ್ಮ ಗಾಂಧಿಯವರು ಕ್ಷಮೆ ಮತ್ತು ಶಾಂತಿಯ ಜೀವನವನ್ನು ನಡೆಸಿದರು ಎಂದರು.
ಸಿಎಸ್‌ಐ ಚರ್ಚಿನ ಬಿಷಪ್ ಹೇಮಚಂದ್ರ ಕುಮಾರ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದ.ಕ. ಜಿಲ್ಲಾಧಿಕಾರಿ ಮುಲೈ ಮುಹಿಲನ್, ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಕಸ್ಟಮ್ಸ್ ಕಮಿಷನರ್ ನಿತಾ ಶೇಖರ್, ಕಮಿಷನರ್ ಆಫ್ ಸೆಂಟ್ರಲ್ ಟ್ಯಾಕ್ಸ್ ಕೇಶವ ನಾರಾಯಣ ರೆಡ್ಡಿ, ಆದಾಯ ತೆರಿಗೆಯ ಆಯುಕ್ತ ಎಸ್ ರಂಗರಾಜನ್, ಶ್ರೀ ರಾಮಕೃಷ್ಣ ಸೊಸೈಟಿಯ ರಘುರಾಮಾನಂದ, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಹರೀಶ್ ಕುಮಾರ್, ಮಂಜೇಶ್ವರ ಶಾಸಕ ಎಕೆ ಅಶ್ರಫ್, ಮಾಜಿ ಶಾಸಕರಾದ ಜೆಆರ್ ಲೋಬೋ, ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಫಾ.ರೂಪೇಶ್ ಮಾಡ್ತಾ ಆಕರ್ಷಕ ಆಟಗಳ ಮೂಲಕ ಮನುರಂಜಿಸಿದರು. ಸಾಮಾಜಿಕ ಸಂಪರ್ಕಾಧಿಕಾರಿ ವಂ. ಡಾ.ಜೆ.ಬಿ. ಸಲ್ಡಾನ್ಹಾ ವಂದಿಸಿದರು. ವಿವಿದ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ರೊಯ್ ಕಾಸ್ತೆಲಿನೊ ಮತ್ತು ತಂಡ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.







