ಮರಕ್ಕೆ ಸ್ಕೂಟರ್ ಢಿಕ್ಕಿ: ಸವಾರ ಮೃತ್ಯು

ಬಂಟ್ವಾಳ: ದ್ವಿಚಕ್ರ ವಾಹನವೊಂದು ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸವಾರ ರಂಗಭೂಮಿ ಕಲಾವಿದರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ದೇವಸ್ಯಪಡೂರು ಗ್ರಾಮದ ಕೊಡ್ಯಮಲೆ ಎಂಬಲ್ಲಿ ರವಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಸ್ಥಳೀಯ ಮರಾಯಿದೊಟ್ಟು ನಿವಾಸಿ ಗೌತಮ್ (26) ಎಂದು ಗುರುತಿಸಲಾಗಿದೆ.
ಮೂಡುಬಿದಿರೆಯ ಕಲಾವಿದರ ಬಳಗಕ್ಕೆ ಸೇರಿದ ಗೌತಮ್ ಅವರು ಬೆಳುವಾಯಿಯಲ್ಲಿ ನಾಟಕ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮನೆಯ ಹತ್ತಿರ ತಲುಪುವಷ್ಟರಲ್ಲಿ ಅವರ ಸ್ಕೂಟರ್ ಮರಕ್ಕೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು ಎನ್ನಲಾಗಿದೆ. ಅದೇ ದಾರಿಯಾಗಿ ಬಂದ ಪ್ರವೀಣ್ ಕುಮಾರ್ ಅವರು ಗೌತಮ್ ಅಪಘಾತದಿಂದ ಗಾಯಗೊಂಡಿರುವುದನ್ನು ಗುರುತಿಸಿ ಮನೆಮಂದಿಗೆ ಮಹಿತಿ ನೀಡಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರೆನ್ನಲಾಗಿದೆ.
ಗಂಭೀರ ಗಾಯಗೊಂಡಿದ್ದ ಗೌತಮ್ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗೌತಮ್ ಅವಿವಾಹಿತರಾಗಿದ್ದು, ಬಿ.ಸಿ.ರೋಡಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಪ್ರತಿಭಾವಂತ ರಂಗಭೂಮಿ ಕಲಾವಿದ ಗೌತಮ್ ಅವರು ವಿವಿಧ ನಾಟಕಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದರು.
ಬಂಟ್ವಾಳ ಟ್ರಾಫಿಕ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







