ಪತ್ರಕರ್ತರ ಚಟುವಟಿಕೆಗಳ ದಾಖಲೀಕರಣ ಅಗತ್ಯ: ಶಾಸಕ ವೇದವ್ಯಾಸ ಕಾಮತ್
‘ಮಂಗಳೂರು ಪ್ರೆಸ್‌ಕ್ಲಬ್ ಸಮಾಚಾರ’ ಇ- ಪತ್ರಿಕೆ ಅನಾವರಣ

ಮಂಗಳೂರು: ಬರಡು ಭೂಮಿಯಲ್ಲಿ ಕೃಷಿ ಕ್ರಾಂತಿ ಮಾಡಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಗೆದ್ದ ಅಮೈ ಮಹಾಲಿಂಗ ನಾಯ್ಕ ಸಹಿತ ಅನೇಕ ಸಾಧಕರನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ದಕ್ಷಿಣ ಕನ್ನಡದ ಪತ್ರಕರ್ತರದ್ದು. ಈ ಹಿನ್ನೆಲೆಯಲ್ಲಿ ಪತ್ರಕರ್ತರ ಚಟುವಟಿಕೆಗಳನ್ನು ಒಳಗೊಂಡ ‘ಮಂಗಳೂರು ಪ್ರೆಸ್‌ಕ್ಲಬ್ ಸಮಾಚಾರ’ ಬಿಡುಗಡೆಗೊಳ್ಳುತ್ತಿರುವುದು ಮಹತ್ವದ ಬೆಳವಣಿಗೆ ಎಂದು ಶಾಸಕ ವೇದವ್ಯಾಸ ಕಾಮತ್ ಅಭಿಪ್ರಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ‘ಮಂಗಳೂರು ಪ್ರೆಸ್‌ಕ್ಲಬ್ ಸಮಾಚಾರ’ ಇ- ಪತ್ರಿಕೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಪ್ರಥಮ, ಕನ್ನಡದ ಪತ್ರಿಕೋದ್ಯ ಮಕ್ಕೆ ಮುನ್ನುಡಿ ಬರೆದ ‘ಮಂಗಳೂರು ಸಮಾಚಾರ’ದಿಂದ ‘ಮಂಗಳೂರು ಪ್ರೆಸ್‌ಕ್ಲಬ್ ಸಮಾಚಾರ’ ತನಕದ ಹಾದಿ ಅತ್ಯಂತ ದೀರ್ಘವಾದುದು. ದ.ಕ. ಜಿಲ್ಲೆಯ ಪತ್ರಕರ್ತರು ಗ್ರಾಮ ವಾಸ್ತವ್ಯ, ಬ್ರಾಂಡ್ ಮಂಗಳೂರು ಸಹಿತ ರಾಜ್ಯದಲ್ಲೇ ಅನೇಕ ಪ್ರಥಮಗಳನ್ನು ನೀಡಿದ್ದಾರೆ ಎಂದರು.
ಮಂಗಳೂರು ಪ್ರಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಗಳೂರು ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಮುಖ್ಯ ಅತಿಥಿಯಾಗಿದ್ದರು. ದಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.
ಪತ್ರಕರ್ತರಾದ ಮಹಮ್ಮದ್ ಆರೀಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.







