ಗುರುಪುರ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಧರಣಿ

ಗುರುಪುರ: ಗುರುಪುರ ಹೋಬಳಿಗೆ ಸುಸಜ್ಜಿತ ಸಮುದಾಯ ಆಸ್ಪತ್ರೆ ಮತ್ತು ಮಂಗಳೂರು ವೆನ್ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕೆಂದು ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಮುಖಂಡರು ಸೋಮವಾರ ಗುರುಪುರ- ಕೈಕಂಬ ಪೇಟೆಯಲ್ಲಿ ಧರಣಿ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, ಗುರುಪುರ ಹೋಬಳಿಯಲ್ಲಿ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಅಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲ. ಇಲ್ಲಿ ವೈದ್ಯರು, ಔಷಧಿ ಯಾವುದೂ ಇಲ್ಲದ ಹೆಸರಿಗೆ ಮಾತ್ರ ಇರುವ ಆರೋಗ್ಯ ಕೇಂದ್ರಗಳು. ಇಲ್ಲಿ 2ಲಕ್ಷ ಕ್ಕೂ ಅಧಿಕ ಜನಸಂಖ್ಯೆ ಇದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಸರಕಾರದ ನಿಯಮಗಳ ಅನುಸಾರ ಎರಡೆರಡು ಸಮುದಾಯ ಆರೋಗ್ಯ ಕೇಂದ್ರ ಇರಬೇಕಿತ್ತು. ಆದರೆ, ಒಂದೂ ಇಲ್ಲದಿರುವುದು ನಮ್ಮ ದುರ್ದೈವ. ಹಾಗಾಗಿ ಗುರುಪುರ ಹೋಬಳಿಗೆ ಶೀಘ್ರವೇ ಸಮುದಾಯ ಆಸ್ಪತ್ರೆ ಮಂಜೂರಾತಿ ಮಾಡಬೇಕು. ಮತ್ತು ಸದ್ಯ ಇರುವ ಎಲ್ಲಾ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಡೆತಯುತ್ತಲೇ ಇರಲಿದೆ ಎಂದು ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನಕಾರರನ್ನುದ್ದೇಶಿಸಿ ಮಾಜಿ ಶಾಸಕ ಮೊಯ್ದೀನ್ ಬಾವ, ಸುಭದಾ ಸಂಸ್ಥೆ ಸೂರಲ್ಪಾಡಿ ನಿರ್ದೇಶಿಕಿ ಸಿಸ್ಟಿರ್ ಅನ್ನಾ ಮರಿಯಮ್ಮ, ಕಾಂಗ್ರೆಸ್ ಜಿಲ್ಲಾ ಮುಖಂಡ ಹಾಗೂ ಚಿಂತಕ ಎಂ.ಜಿ. ಹೆಗ್ಡೆ, ಕೆಪಿಸಿಸಿ ಸದಸ್ಯ ಕೆ. ಆರ್. ಪೃಥ್ವಿರಾಜ್, ರಾಜ್ಯ ರೈತ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ, ಎಂ. ದೇವದಾಸ್, ಸಿಪಿಐಎಂ ಜಿಲ್ಲಾ ಮುಖಂಡ ಸುನಿಲ್ ಬಜಾಲ್ ಮತ್ತಿತರರು ಮಾತನಾಡಿದರು.
ಧರಣಿಯಲ್ಲಿ ಮುಖಂಡರಾದ ಗಣೇಶ್ ಪೂಜಾರಿ, ಗಫೂರ್, ಇರ್ಫಾನ್, ಶರೀಫ್ ಉಲಾಯಿಬೆಟ್ಟು, ಸದಾಶಿವದಾಸ್ ಕುಪ್ಪೆಪದವು, ಅನಿತಾ ಡಿ'ಸೋಜ, ಶಾಹುಲ್ ಹಮೀದ್, ಮುಹಮ್ಮದ್ ಶರೀಫ್ ಕುಪ್ಪೆಪದವು, ರಫೀಕ್ ಆಚಾರಿ ಜೋರ, ಬಾಬು ಸಾಲ್ಯಾನ್, ವಸಂತಿ ಕುಪ್ಪೆಪದವು, ಡಾ. ಸಿದ್ದೀಕ್ ಅಡ್ಡೂರು, ದಾವೂದ್ ಬಂಗ್ಲೆಗುಡ್ಡೆ, ಪ್ರವೀಣ್ ತಾರಿಗುಡ್ಡೆ, ಜಯ ಶೀಲ ಕರ್ಕೇರ, ಹರೀಶ್ ಕೆ. ಡಿವೈಎಫ್‌ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.







