ಕೊಂಕಣಿ ಭಾಶಾ ಮಂಡಳ್ ಕರ್ನಾಟಕದ ಭಾಂಗಾರೋತ್ಸವ ಸಮಾರೋಪ

ಮಂಗಳೂರು, ಜ.10: ಕೊಂಕಣಿ ಭಾಷೆಯು ಯಾವುದೇ ಧರ್ಮ, ಜಾತಿ, ವರ್ಗಕ್ಕೆ ಸೀಮಿತವಾಗಿಲ್ಲ. ಅದು ಹಿಮಾಲಯದಷ್ಟು ಎತ್ತರಕ್ಕೆ ಬೆಳೆದು ನಿಂತಿವೆ. ಜೊತೆಗೆ ಭಾಷಾ ವಿಸ್ತಾರತೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರೊನಾಲ್ಡ್ ಫೆರ್ನಾಂಡೀಸ್ ಹೇಳಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ನಡೆದ ಕೊಂಕಣಿ ಭಾಶಾ ಮಂಡಳ್ ಕರ್ನಾಟಕದ ಭಾಂಗಾರೋತ್ಸವ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಭಾಷೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಸಂಘಟನೆ, ಚಳುವಳಿ, ಸರಕಾರದ ಪ್ರೋತ್ಸಾಹ ಹಾಗೂ ಶಾಸ್ತ್ರೀಯ ಶಿಕ್ಷಣದ ಅಗತ್ಯ ವಿದೆ. ಇವುಗಳು ಕೊಂಕಣಿಗೆ ಲಭಿಸಿದೆಯಾದರೂ ಕೂಡ ಭಾಷೆಯ ಅಭಿವೃದ್ಧಿಗೆ ಇವುಗಳ ನಡುವೆ ಹೊಂದಾಣಿಕೆ ಇಲ್ಲದಿರುವುದರಿಂದ ಸಮಸ್ಯೆಗೆ ಸಿಲುಕಿದೆ ಎಂದರು.
ಕೊಂಕಣಿ ಭಾಶಾ ಮಂಡಳ್ ಕರ್ನಾಟಕದ ಈ ಹಿಂದಿನ 12 ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಜೀವಮಾನದ ಸಾಧನೆ ಗಾಗಿ ರಾಮದಾಸ್ ಗುಲ್ವಾಡಿ, ಜಾನಪದ ಕ್ಷೇತ್ರದ ಸಾಧನೆಗಾಗಿ ಕಲ್ಯಾಣಿಬಾಯಿ ನೀರ್ಕೆರೆ, ಕಾರ್ಯಕರ್ತ ಪುರಸ್ಕಾರಕ್ಕೆ ಅಪ್ಪುರಾಯ ಪೈ, ಯುವ ಪುರಸ್ಕಾರಕ್ಕೆ ಕ್ಲಾನ್‌ವಿನ್ ಫೆರ್ನಾಂಡೀಸ್ ಹಾಗೂ ಪುಸ್ತಕ ಪುರಸ್ಕಾರಕ್ಕೆ ದಿವೋಚೋ ಉಜ್ವಾಡ್ ಕೃತಿಕಾರರಾದ ಕೃತಿಕಾ ಕಾಮತ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ ಕೊಂಕಣಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 50 ಮಂದಿ ಸಾಧಕರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಸ್ಥಾಪಕ ಖಜಾಂಚಿ ಮಾ. ಮಾರ್ಕ್ ವಾಲ್ಡರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್, ಉದ್ಯಮಿ ಪ್ರಶಾಂತ್ ಶೇಟ್, ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಅಧ್ಯಕ್ಷ ಕೆ.ವಸಂತ್ ರಾವ್, ಖಜಾಂಚಿ ಸುರೇಶ್ ಶೆಣೈ, ಕಾರ್ಯದರ್ಶಿ ರೇಮಂಡ್ ಡಿ ಕುನ್ಹಾ ಮತ್ತಿತರರು ಉಪಸ್ಥಿತರಿದ್ದರು.
ನಾನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ವಿನ್ಸೆಂಟ್ ಫೆರ್ನಾಂಡೀಸ್ ಅವರಿಂದ ಸಂಗೀತ ಮತ್ತು ಸಭಾ ಕಾರ್ಯಕ್ರಮದ ಬಳಿಕ ಮುಂಗೈತಲೆ ನಾಟಕ ಪ್ರದರ್ಶನ ನಡೆಯಿತು. ಜೂಲಿಯೆಟ್ ಫೆರ್ನಾಂಡೀಸ್ ಹಾಗೂ ಫೆಲ್ಸಿ ಲೋಬೋ ಕಾರ್ಯಕ್ರಮ ನಿರೂಪಿಸಿದರು.







