ಅಮೃತರು ಕನ್ನಡ,ತುಳು ಸಾಹಿತ್ಯ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದರು: ಪ್ರದೀಪ ಕಲ್ಕೂರ

ಮಂಗಳೂರು: ದಿವಂಗತ ಡಾ.ಅಮೃತ ಸೋಮೇಶ್ವರರು ತನ್ನ ವೈಚಾರಿಕ ಬರಹಗಳ ಮೂಲಕ ಮಹತ್ಸಾಧನೆಗೈದಿ ರುವರು. ಕವನ, ವಿಮರ್ಶಾ ಗ್ರಂಥ, ಯಕ್ಷಗಾನ ಪ್ರಸಂಗ ರಚನೆ, ತುಳು ಸಿನಿಮಾಗಳ ಹಾಡು ಸಹಿತ ಬಹು ವಿಧಗಳಲ್ಲಿ ಕನ್ನಡ ಹಾಗೂ ತುಳು ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವ ಅವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ಬಲುದೊಡ್ಡ ನಷ್ಟ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದ್ದಾರೆ.
ಕಲ್ಕೂರ ಪ್ರತಿಷ್ಠಾನವು ಆಯೋಜಿಸಿದ್ದ ಅಮೃತರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿ ಸತತ ಐದು ಅವಧಿಯನ್ನು ಪೂರೈಸಿದ ಸಂದರ್ಭ ತನಗೆ ಅಮೃತರು ಓರ್ವ ಗುರುವಿನಂತೆ ಮಾರ್ಗದರ್ಶಕರಾಗಿದ್ದು ಸಾಹಿತ್ಯ ಸೇವೆಗೆ ಶಕ್ತಿ ತುಂಬಿರುವುದನ್ನು ಕಲ್ಕೂರ ಸ್ಮರಿಸಿದರು. ಪರಿಪೂರ್ಣ ಕೌಟುಂಬಿಕ ಜೀವನ ನಡೆಸಿದ ಅಮೃತರ ಬದುಕು ಇತರರಿಗೂ ಆದರ್ಶವೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ನಂದಳಿಕೆ ಬಾಲಚಂದ್ರ ರಾವ್ , ಚಂದ್ರಶೇಖರ ಮಯ್ಯ, ವೀಣಾ ಐತಾಳ್, ಅರುಣಾ ನಾಗರಾಜ್, ಜನಾರ್ದನ ಹಂದೆ, ಪಿ.ಜಯಾನಂದ ರಾವ್,ಮಧುಸೂದನ ಅಲೆವೂರಾಯ, ಡಿ.ಐ. ಅಬೂಬಕರ್ ಕೈರಂಗಳ, ನಿತ್ಯಾನಂದ ಕಾರಂತ ಪೊಳಲಿ, ಎನ್.ಎ.ಪ್ರಭಾಕರ ಶರ್ಮ, ವಿಜಯ ಲಕ್ಷ್ಮೀ ಬಿ.ಶೆಟ್ಟಿ, ಜಿ.ಕೆ.ಭಟ್ ಸೇರಾಜೆ, ಸುಧಾಕರ ರಾವ್ ಪೇಜಾವರ, ಕುಶಾಲಪ್ಪ ಗೌಡ, ಮಂಜುಳಾ ಶೆಟ್ಟಿ, ಜಯಪಾಲ ಶೆಟ್ಟಿ ಐಕಳಬಾವ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು.







