ವಿವೇಕಾನಂದರ ಸಂದೇಶಗಳು ಸಮಾಜಕ್ಕೆ ಬೆಳಕಾಗಿದೆ: ಮಾಜಿ ಯೋಧ ಕ್ಯಾ.ಬ್ರಜೇಶ್ ಚೌಟ

ಮಂಗಳೂರು : ಸ್ವಾಮಿ ವಿವೇಕಾನಂದರು ಸಾರಿದ ಸಂದೇಶಗಳು ಸಮಾಜಕ್ಕೆ ಬೆಳಕಾಗಿದ್ದು, ಅವರ ಆದರ್ಶಗಳು ದೇಶದ ಯುವಕರ ಭವಿಷ್ಯಕ್ಕೆ ದಾರಿದೀಪವಾಗಿದೆ ಎಂದು ಮಾಜಿ ಯೋಧ ಕ್ಯಾ.ಬ್ರಜೇಶ್ ಚೌಟ ಹೇಳಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ.ಜಿಲ್ಲೆ ಇದರ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಅಂಗವಾಗಿ ಶುಕ್ರವಾರ ತಣ್ಣೀರುಬಾವಿ ಬೀಚ್‌ನ ಟ್ರೀ ಪಾರ್ಕ್‌ನಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಭವ್ಯ ಭಾರತದ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಪ್ರೇರಣೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆಡ್ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಮಾತನಾಡಿ ‘ಯುವ ಶಕ್ತಿಯನ್ನು ಜಾಗೃತಿಗೊಳಿಸಿದ ಸ್ವಾಮಿ ವಿವೇಕಾನಂದರ ಮಹಾ ಸಂಕಲ್ಪವನ್ನು ಪರಿಪೂರ್ಣವಾಗಿ ಸಾಕಾರಗೊ ಳಿಸುವುದು ನಮ್ಮ ವಿದ್ಯಾರ್ಥಿಗಳ ಗುರಿಯಾಗಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಡಾ. ರವೀಂದ್ರಾಚಾರಿ, ಯೆನೆಪೋಯ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಅರುಣ್.ಎ ಭಾಗವತ್, ರೆಡ್ಕ್ರಾಸ್ ಸಂಸ್ಥೆಯ ರಾಜ್ಯ ಪ್ರತಿನಿಧಿ ಯತೀಶ್ ಬೈಕಂಪಾಡಿ, ಮಂಗಳೂರು ವಿಶ್ವವಿದ್ಯಾನಿಲಯದ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್ ಅಮೀನ್, ನಿಟ್ಟೆ ವಿಶ್ವ ವಿದ್ಯಾನಿಲಯದ ಯುವ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ. ಶಂತನು ಶಾ, ಯೆನೆಪೋಯ ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ. ನಿತ್ಯಶ್ರೀ ಬಿ.ವಿ., ಮಂಗಳೂರು ವಿ.ವಿ. ಯುವ ರೆಡ್ಕ್ರಾಸ್ ಸಲಹಾ ಸಮಿತಿಯ ಸದಸ್ಯರಾದ ಡಾ. ಗಣಪತಿ ಗೌಡ, ನಿತ್ಯಾನಂದ ಬಿ ಶೆಟ್ಟಿ, ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಖಜಾಂಜಿ ಮೋಹನ್ ಶೆಟ್ಟಿ , ಕಾರ್ಯದರ್ಶಿ ಸಂಜಯ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯುವ ರೆಡ್ಕ್ರಾಸ್ ಸಲಹಾ ಉಪ ಸಮಿತಿಯ ನಿರ್ದೇಶಕ ಸಚೇತ್ ಸುವರ್ಣ ಸ್ವಾಗತಿಸಿದರು. ಯೆನೆಪೋಯ ವಿಶ್ವವಿದ್ಯಾ ನಿಲಯದ ವಿದ್ಯಾರ್ಥಿಗಳಾದ ಅರ್ಚನಾ ಮತ್ತು ಅರೀನಾ ಕಾರ್ಯಕ್ರಮ ನಿರೂಪಿಸಿದರು. ಯುವ ದಿನಾಚರಣೆ ಅಂಗವಾಗಿ ಯುವ ರೆಡ್‌ಕ್ರಾಸ್ ಸದಸ್ಯರು ಬೀಚ್ ಸ್ವಚ್ಛತಾ ಕಾರ್ಯ ನಡೆಸಿದರು.







