ಕವಿತೆಯೆಂದರೆ ಒಂದು ಶೋಧ : ನೂತನ್ ಸಾಖರ್ದಾಂಡೆ

ಮಂಗಳೂರು: ಕಾವ್ಯ ಮತ್ತು ಜೀವನ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ವಿಚಾರ ಮತ್ತು ವಾಸ್ತವ ಯಾವತ್ತೂ ಭಿನ್ನವಾಗಿರುತ್ತವೆ. ಈ ಭಿನ್ನತೆಯನ್ನು ಅರಿಯಲು ಕಾವ್ಯ ಸಹಕಾರಿ. ಆದುದರಿಂದ ಕಾವ್ಯವನ್ನು ಒಂದು ಶೋಧವೆಂದು ಪರಿಗಣಿಸಬಹುದು ಎಂದು ಖ್ಯಾತ ಕೊಂಕಣಿ ಕವಿ ಗೋವಾದ ನೂತನ್ ಸಾಖರ್ದಾಂಡೆ ಅಭಿಪ್ರಾಯಟ್ಟಿದ್ದಾರೆ.
ಪುತ್ತೂರಿನ ಸಂತ ಫಿಲೋಮಿನಾ ಕಾಲೆಜಿನಲ್ಲಿ ಹೊಸದಿಲ್ಲಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡ ಕವಿಸಂಧಿ ಕಾರ್ಯಕ್ರಮದಲ್ಲಿ ಸ್ವರಚಿತ ಕವಿತೆಗಳನ್ನು ವಾಚಿಸಿ, ತಮ್ಮ ಕಾವ್ಯಪ್ರವಾಸವನ್ನು ಹಂಚಿಕೊಂಡರು.
ಅಸ್ವಸ್ಥತೆ ಕಾಡದೇ ಕವಿಯಾಗುವುದು ಕಷ್ಟ. ಕವಿಗಳು ರಮ್ಯ ಲೋಕದ ಆಚೆ, ಸಾಮಾಜಿಕ ಅಸಮಾನತೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪರಿಸರದ ಮೇಲಾಗುತ್ತಿರುವ ಹಾನಿ ಈ ವಿಚಾರಗಳ ಮೇಲೆ ಕಾವ್ಯ ಕಟ್ಟಬೇಕು. ಕಾವ್ಯದ ತೌಲಾನಿಕ ಅಧ್ಯಯನ ನಡೆಯಬೇಕು ಎಂಬ ಒತ್ತಾಸೆ ಕವಿ ನೂತನ್ ವ್ಯಕ್ತಪಡಿಸಿದರು.
ಜನಪ್ರಿಯ ಕವಿತೆಗಳಾದ - ಪಾಸ್ವರ್ಡ್, ಸ್ಮಾರ್ಟ್ಪೋನ್, ಅಧೊಳಿ ಒಳಗೊಂಡಂತೆ ಒಟ್ಟು ಏಳು ಕವಿತೆಗಳನ್ನು ಸಾದರ ಪಡಿಸಿದರು.
ಹೊಸದಿಲ್ಲಿ ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಸಲಹಾ ಸಮಿತಿಯ ಸಂಚಾಲಕ ಕವಿ ಮೆಲ್ವಿನ್ ರೊಡ್ರಿಗಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಸಲಹಾ ಸಮಿತಿಯ ಸದಸ್ಯ ಹೆನ್ರಿ ಮೆಂಡೋನ್ಸಾ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಇನ್ನೋರ್ವ ಸದಸ್ಯ ಸ್ಟ್ಯಾನಿ ಬೇಳ ವಂದಿಸಿದರು.







