ಗಾಂಜಾ ಸೇವನೆ ಆರೋಪ: ನಾಲ್ವರ ಬಂಧನ

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಣಂಬೂರು, ಕೆಎಸ್ಸಾರ್ಟಿಸಿ, ವಳಚ್ಚಿಲ್ ಸಮೀಪ ಮಾದಕ ಸೇವನೆ ಆರೋಪದಲ್ಲಿ 4ಮಂದಿಯನ್ನು ನಗರ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಜ.17ರಂದು ಜೋಕಟ್ಟೆ ಕ್ರಾಸಿನ ಬಳಿ ಮಾದಕ ಅಮಲಿನಲ್ಲಿದಂತೆ ಕಂಡು ಬಂದ ಗುರುದೀಪ್ ಸಿಂಗ್ (23) ಮತ್ತು ರಾಹುಲ್ (24) ಎಂಬವರನ್ನು ಪಣಂಬೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿ, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಮಾದಕ ಸೇವಿಸಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಪಣಂಬೂರು ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯಿದೆ-1985ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ.17ರಂದು ನಗರದ ಕೆಎಸ್ಸಾರ್ಟಿಸಿ ಬಸ್ ತಂಗುದಾಣದ ಬಳಿ ವ್ಯಕ್ತಿಯೊಬ್ಬ ಮಾದಕ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಆರೋಪದಲ್ಲಿ ಸೆನ್ ಪೊಲೀಸರು ಅಜ್ಜಿನಡ್ಕ ಬದ್ರಿಯಾನಗರ ನಿವಾಸಿ ಕೆ.ಪಿ. ಹೈದರ್ ಆಲಿ (53) ಎಂಬಾತನನ್ನು ವಶಕ್ಕೆ ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನಗರದ ಹೊರವಲಯದ ವಳಚ್ಚಿಲ್ ಬಳಿ ಮಾದಕ ಸೇವನೆ ಆರೋಪದಲ್ಲಿ ಅಡ್ಯಾರ್ ನಿವಾಸಿ ಮನಾಝ್ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜ.17ರಂದು ಈತ ವಳಚ್ಚಿಲ್ ಜಂಕ್ಷನ್ ಬಳಿ ಆರೋಪಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೊಪಿ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







