ಸಣ್ಣ ಕೈಗಾರಿಕೆಗಳು ಸಕಾಲದಲ್ಲಿ ಆರ್ಥಿಕ ನೆರವು ಅಗತ್ಯ: ಜಯಪ್ರಕಾಶ್ ಹೆಗ್ಡೆ

ಮಂಗಳೂರು: ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಮಸ್ಯೆಗಳು ಪರಿಹಾರವಾದರೆ ಮಾತ್ರ ಉದ್ಯಮರಂಗ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕೆನರಾ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಮತ್ತು ಹಣಕಾಸಿನ ಅರಿವು ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಮಸ್ಯೆಗಳನ್ನು ಪರಿಹರಿಸಿ ಹಣಕಾಸಿನ ನೆರವು ಸಿಕ್ಕಾಗ ಮಾತ್ರ ಕೈಗಾರಿಕೆಗಳು ಮುಂದೆ ಬರಲು ಸಾಧ್ಯವಾಗುತ್ತದೆ. ಯುವಜನತೆ ಉದ್ಯೋಗದ ಕಡೆ ಮುಖ ಮಾಡದೆ ಕೈಗಾರಿಕೆಗಳ ಸ್ಥಾಪನೆಗೆ ಮುಂದಾ ಗಬೇಕು ಎಂದು ಜಯಪ್ರಕಾಶ್ ಹೆಗ್ಡೆ ಕರೆ ನೀಡಿದರು.
ಸಂಘದ ಅಧ್ಯಕ್ಷ ಸಿಎ ಶಶಿಧರ ಶೆಟ್ಟಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಂಎಸ್‌ಎಂಇ ವಲಯದ ಉತ್ತೇ ಜನಕ್ಕಾಗಿ ಘೋಷಿಸಿರುವ ವಿವಿಧ ಯೋಜನೆಗಳು ಮತ್ತು ರಿಯಾಯಿತಿಗಳ ಕುರಿತು ಉಪಕ್ರಮಗಳನ್ನು ಪ್ರಾರಂಭಿಸುತ್ತಿವೆ. ಆದರೆ ಸರಿಯಾದ ಮಾರ್ಗದರ್ಶನ ಮತ್ತು ಅರಿವಿನ ಕೊರತೆಯಿಂದಾಗಿ ಈ ಸೌಲಭ್ಯಗಳು ಸದ್ಭಳಕೆಯಾಗಿಲ್ಲ. ಯಾವುದೇ ಯೋಜನೆಗಳ /ಉಪಕ್ರಮಗಳ ಯಶಸ್ವಿ ಅನುಷ್ಠಾನವು ಮಾಹಿತಿಯು ಪೂರ್ಣಪ್ರಮಾಣದಲ್ಲಿ ಫಲಾನುಭವಿಗಳನ್ನು ತಲುಪಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.
ರಾಜ್ಯಾದ್ಯಂತ ’ಎಂಎಸ್‌ಎಂಇ’ಗಳನ್ನು ಸಬಲೀಕರಣಗೊಳಿಸುವ ಸಲುವಾಗಿ ಅವಕಾಶಗಳನ್ನು ಸೃಷ್ಟಿಸುವುದು, ಅಂತರ ವನ್ನು ನಿವಾರಿಸುವುದು ಎಂಬ ಶೀರ್ಶಿಕೆಯಡಿ ಆರ್ಥಿಕ ಸಾಕ್ಷರತೆ ಹಾಗೂ ಕ್ರೆಡಿಟ್ ಲಿಂಕ್, ಮಾರುಕಟ್ಟೆಯ ಮಾನ್ಯತೆ, ಡಿಜಿ ಟಲ್ ಮೂಲಕ ಗ್ರಾಹಕರ ನೆಲೆಯನ್ನು ವಿಸ್ತರಿಸುವ ಒಎನ್‌ಡಿಸಿ, ಟ್ರೆಡ್ಸ್ ಪ್ಲಾಟ್‌ಫಾರ್ಮ್ ಸದುಪಯೋಗಪಡಿಸಿಕೊಳ್ಳುವ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಯಶ್ಸಸ್ವಿಯಾಗಿ ಆಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಪ್ರಾದೇಶಿಕ ಕಚೇರಿ ಉಪ ಪ್ರಧಾನ ವ್ಯವಸ್ಥಾಪಕ ಬಿ. ಉಳಗಿಯನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಕೆನರಾ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಗ್ರಾಮೀಣ ಕಾಸಿಯಾ ಅರುಣ್ ಪಡಿಯಾರ್ ಎನ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಶಾಲ್ ಎಲ್. ಸಾಲಿಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜು, ಖಜಾಂಚಿ ಹೆಚ್.ಕೆ. ಮಲ್ಲೇಶಗೌಡ ಮತ್ತಿತರರು ಉಪಸ್ಥಿತರಿದ್ದರು.







