ದ.ಕ.ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಯಶಸ್ವಿಗೆ ಜಿಪಂ ಸಿಇಒ ಸೂಚನೆ

ಮಂಗಳೂರು, ಜ.20: ದೇಶದ ಸಂವಿಧಾನದ ಆಚರಣೆ ಮತ್ತು ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸಂವಿಧಾನ ಜಾಗೃತಿ ಜಾಥಾವನ್ನು ಕಾರ್ಯಕ್ರಮವನ್ನು ಜ.26ರಿಂದ ದ.ಕ. ಜಿಲ್ಲಾದ್ಯಂತ ಆಚರಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ದ.ಕ.ಜಿಪಂ ಸಿಇಒ ಡಾ. ಆನಂದ್ ಸೂಚನೆ ನೀಡಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಸ್ತಬ್ಧಚಿತ್ರ ಹಾಗೂ ಜಿಲ್ಲಾದ್ಯಂತ ಅದರ ಸಂಚಾರಕ್ಕೆ ಮೆರವಣಿಗೆ ಮಾರ್ಗವನ್ನು ಸಿದ್ದಡಿಸಿಕೊಳ್ಳುವಂತೆ ತಿಳಿಸಿದ ಅವರು, ಸ್ತಬ್ಧಚಿತ್ರ ರಚನೆಗೆ, ಭಾರತದ ಸಂವಿಧಾನ ಪೀಠಿಕೆ, ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಾಗೂ ಡಾ.ಬಿ.ಆರ್. ಅಂಬೇಡ್ಕರ್‌ರ ಪರಿಕಲ್ಪನೆ, ಬಸವಣ್ಣನವರ ವಚನಗಳು ಮತ್ತು ಭಾರತದ ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆ, ಜಿಲ್ಲೆಯ ಸ್ಥಳೀಯ ಐತಿಹಾಸಿಕ ವ್ಯಕ್ತಿಗಳು, ಸಾಹಿತ್ಯ ದಿಗ್ಗಜರ ಸಹಿತ ಪ್ರಮುಖ ವ್ಯಕ್ತಿಗಳು ಹಾಗೂ ಸ್ಥಳೀಯ ಕಲೆ ಸಂಸ್ಕೃತಿ ಇತ್ಯಾದಿಗೆ ಆದ್ಯತೆ ನೀಡಬೇಕು. ರಾಜ್ಯ ಸರಕಾರ ಜಾರಿಗೊಳಿಸಿದ ಐದು ಖಾತರಿಗಳನ್ನು ಕೂಡ ಸ್ತಬ್ಧಚಿತ್ರದಲ್ಲಿ ಅಳವಡಿಸಬೇಕು ಎಂದರು.
ಜಾಥಾ ಮೆರವಣಿಗೆಯು ಜಿಲ್ಲೆಯ ಎಲ್ಲಾ ಗ್ರಾಮಗಳ ಮೂಲಕ ಹಾದು ಹೋಗುವಂತೆ ಮಾರ್ಗ ಸಿದ್ಧಪಡಿಸಬೇಕು. ತಾಲೂಕುಗಳ ಗಡಿಯಲ್ಲಿ ಸಂಬಂದಪಟ್ಟ ತಾಲೂಕಿನ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಥಾವನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಎಲ್ಲಾ ಸರಕಾರಿ ನೌಕರರು ಜಾಥಾದಲ್ಲಿ ಭಾಗವಹಿಸಬೇಕು ಎಂದರು.
ಜಾಥಾ ತಂಗುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಸಂವಿಧಾನದ ಮಹತ್ವ ಕುರಿತು ಪುಸ್ತಕಗಳನ್ನು ಹಾಗೂ ಸಂವಿಧಾನ ಪೀಠಿಕೆಯ ಪ್ರತಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಮೆರವಣಿಗೆ ಸಾಗುವ ಸಂದರ್ಭ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪ.ಜಾತಿ, ಪಂಗಡಗಳ ಜನರ ಮನೆಗೆ ಭೇಟಿ ನೀಡಬೇಕು. ಸರಕಾರದ ಐದು ಖಾತರಿಗೆ ಅರ್ಹರಿದ್ದೂ ಅವ ಕಾಶ ವಂಚಿತರಾಗಿದ್ದರೆ ಅವರಿಗೆ ಅಗತ್ಯ ನೆರವು ನೀಡಬೇಕು ಎಂದು ಡಾ. ಆನಂದ್ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಮಾತನಾಡಿ ಜಿಲ್ಲೆಯ ಗ್ರಾಪಂ, ನಗರ ಸ್ಥಳಿಯ ಸಂಸ್ಥೆಗಳು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಅಗತ್ಯ ನೆರವು ಪಡೆದು ಕಾರ್ಯಕ್ರಮ ಯಶಸ್ಸುಗೊಳಿಸಬೇಕು. ಸಾರ್ವಜನಿಕರಿಗೆ, ಯುವಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ದೇಶದ ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.







