ಸಂವಿಧಾನ ವಿರೋಧಿ ಹೇಳಿಕೆಗೆ ಕಡಿವಾಣ ಹಾಕಲು ಲೀಗ್ ಮನವಿ

ಮಂಗಳೂರು: ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ರಾಷ್ಟ್ರಪತಿ, ಪ್ರಧಾನಿ, ಕರ್ನಾಟಕ ರಾಜ್ಯಪಾಲರಿಗೆ ದ.ಕ.ಜಿಲ್ಲಾಧಿಕಾರಿಯ ಮೂಲಕ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ.ಜಿಲ್ಲಾ ಸಮಿತಿಯು ಮನವಿ ಸಲ್ಲಿಸಿದೆ.
ಜನಪ್ರತಿನಿಧಿಗಳು ಸಂವಿಧಾನಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಂವಿಧಾನ ವಿರೋಧಿಯಾಗಿ ನಡೆದು ಕೊಳ್ಳುತ್ತಿದ್ದಾರೆ. ಅದರಲ್ಲೂ ಸಂಸದ ಅನಂತ ಕುಮಾರ್ ಹೆಗಡೆ ಅಯೋಧ್ಯೆಯ ವಿಚಾರವನ್ನು ಮುಂದಿಟ್ಟುಕೊಂಡು ಭಟ್ಕಳ ದಲ್ಲಿರುವ ಚಿನ್ನಪಳ್ಳಿ ಮಸೀದಿ ಸಹಿತ ರಾಜ್ಯದ ಹಲವು ಮಸೀದಿಗಳನ್ನು ಧ್ವಂಸಗೊಳಿಸಲು ಕರೆ ನೀಡಿದ್ದಾರೆ. ಅದಕ್ಕೆ ಶಾಸಕ ಬಸವರಾಜ್ ಯತ್ನಾಳ್ ಕೂಡ ಧ್ವನಿಗೂಡಿಸುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯನ್ನು ಕೂಡ ಅನಂತ ಕುಮಾರ್ ಹೆಗಡೆ ಸಮರ್ಥಿಸುತ್ತಿದ್ದಾರೆ. ಹಾಗಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವ ಅನಂತ ಕುಮಾರ್ ಹೆಗಡೆ ಸಹಿತ ಇತರ ಜನಪ್ರತಿನಿಧಿಗಳನ್ನು ಸದಸ್ಯತ್ವದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದೆ.
ಮುಸ್ಲಿಂ ಲೀಗ್ ಮುಖಂಡರಾದ ಹಾಜಿ ಮುಹಮ್ಮದ್ ಪಿಎ, ರಿಯಾಝ್ ಹರೇಕಳ, ಮುಹಮ್ಮದ್ ಇಸ್ಮಾಯೀಲ್, ಮುಹಮ್ಮದ್ ಅಝರ್ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.





